ಉತ್ತರಪ್ರದೇಶ/ಕನೌಜ್: ಮದುವೆ ಶಾಸ್ತ್ರಗಳು ಆರಂಭಗೊಂಡ ಸ್ವಲ್ಪ ಹೊತ್ತಿಗೆ ವಧು ಮೃತಪಟ್ಟಿರುವ ದುರ್ಘಟನೆ ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಥಾಥಿಯಾ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಭಗತ್ಪುರ್ವಾ ಗ್ರಾಮದಲ್ಲಿ ಸಂಭವಿಸಿದೆ.
ಮದುಮಗ ಸಂಜಯ್ ತನ್ನ ಕುಟುಂಬ ಸದಸ್ಯರೊಂದಿಗೆ ಆಗಮಿಸಿದ ನಂತರ ರಾತ್ರಿ ವೇಳೆ ವಿವಾಹದ ವಿಧಿವಿಧಾನಗಳು ಪ್ರಾರಂಭವಾದವು. ಶಾಸ್ತ್ರಗಳು ನಡೆಯುತ್ತಿದ್ದಾಗ ವಧು 19 ವರ್ಷದ ವಿನಿತಾ ಇದ್ದಕ್ಕಿದ್ದಂತೆ ಕುಸಿದುಬಿದ್ದರು. ತಕ್ಷಣವೇ ಆಕೆಯನ್ನು ಕುಟುಂಬಸ್ಥರು ಕಾನ್ಪುರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್ ಮಾಡಿ ನೆಗೆಟಿವ್ ಬಂದ ಮೇಲೆ ಆಕೆಗೆ ಚಿಕಿತ್ಸೆ ನೀಡಲು ವೈದ್ಯರು ಮುಂದಾದರು. ಆದರೆ ತೀವ್ರ ನಿತ್ರಾಣಗೊಂಡಿದ್ದ ವಿನಿತಾ ಅಷ್ಟೊತ್ತಿಗಾಗಲೇ ಕೊನೆಯುಸಿರೆಳೆದಿದ್ದಳು.
ಕುಟುಂಬವು ತುರ್ತು ಸಂಖ್ಯೆ 112 ಕ್ಕೆ ಕರೆ ಮಾಡಿ ಪೊಲೀಸರಿಗೆ ಘಟನೆಯ ಮಾಹಿತಿ ನೀಡಿದ್ದು, ಮೃತದೇಹವನ್ನು ಈಗ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ವರದಿ ಬಂದ ನಂತರ ಪರಿಶೀಲಿಸಿ ನಾವು ಕ್ರಮ ಕೈಗೊಳ್ಳುತ್ತೇವೆ" ಎಂದು ಕನೌಜ್ನ ಪೊಲೀಸರು ತಿಳಿಸಿದ್ದಾರೆ.
ಇತ್ತ ಮೃತ ವಧುವಿನ ಕುಟುಂಬವು ವಿನಿತಾಳ ಅಂತ್ಯಕ್ರಿಯೆ ನಡೆಸಿದರೆ, ಅತ್ತ ಮದುವೆಗೆಂದು ಬಂದಿದ್ದ ವರನ ಕುಟುಂಬಸ್ಥರು ವಧು ಸಾವಿನಿಂದಾಗಿ ವಾಪಸ್ ತೆರಳಿದರು.