ಮಾಲ್ಡಾ (ಪಶ್ಚಿಮ ಬಂಗಾಳ): ರಾಜ್ಯದ ನಾನಾ ಕಡೆ ಮಳೆಯಾರ್ಭಟ ಹೆಚ್ಚಾಗಿರುವ ಹಿನ್ನೆಲೆ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇನ್ನು ಮಳೆಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿ ಹಾನಿಯಾಗಿದೆ.
ಗಂಗಾ ನದಿ ತುಂಬಿ ಹರಿಯುತ್ತಿದ್ದು, ನದಿ ಭಾಗದಲ್ಲಿ ಹಿಂದೆಂದೂ ಕಂಡಿರದಷ್ಟು ಮಣ್ಣಿನ ಸವಕಳಿ ಉಂಟಾಗಿದೆ. ಇದರಿಂದಾಗಿ ಇನ್ನೂ ಹೆಚ್ಚಿನ ಮಣ್ಣು ಕೊಚ್ಚಿ ಹೋಗುವುದನ್ನು ತಡೆಯಲು ಅಧಿಕಾರಿಗಳು ಹಾಗೂ ಸ್ಥಳೀಯರು ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದು, ಮಣ್ಣು ಕೊಚ್ಚಿ ಹೋಗದಂತೆ ತಡೆಗೋಡೆಯಂತಹ ಬೇಲಿ ನಿರ್ಮಾಣದಲ್ಲಿ ನಿರತರಾಗಿದ್ದಾರೆ.
ಅಧಿಕ ಪ್ರಮಾಣದ ಮಣ್ಣಿನ ಸವಕಳಿಯು ಇಲ್ಲಿನ ಹಿರಾನಂದಪೂರ್, ಕೇಶವ್ಪುರ್ ಹಾಗೂ ಕೋಶಿಘಾಟ್ನಲ್ಲಿ ನೆಲೆಸಿರುವ ಲಕ್ಷಕ್ಕೂ ಅಧಿಕ ಜನರ ಭೀತಿಗೆ ಕಾರಣವಾಗಿದೆ. ಇದಲ್ಲದೆ ಮಾಲ್ಡಾ ಪ್ರದೇಶದಲ್ಲಿ ಈವರೆಗೆ ಸುಮಾರು 50 ಮನೆಗಳು ಹಾನಿಗೊಳಗಾಗಿವೆ.