ತಿರುಪತಿ (ಆಂಧ್ರ ಪ್ರದೇಶ): ತಿರುಪತಿಯ ತಿರುಮಲದಲ್ಲಿ ಬ್ರಹ್ಮೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಈ ಸಂಭ್ರಮದಲ್ಲಿ ನಿನ್ನೆ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಸಹ ಪಾಲ್ಗೊಂಡಿದ್ದರು. ದೆಹಲಿಯಲ್ಲಿದ್ದ ಸಿಎಂ ಜಗನ್, ವಿಶೇಷ ವಿಮಾನದಲ್ಲಿ ತಿರುಮಲಕ್ಕೆ ಪ್ರಯಾಣ ಬೆಳೆಸಿದ್ದರು.
ತಿಮ್ಮಪ್ಪನ ಸನ್ನಿಧಿಯಲ್ಲಿ ನಡೆದ ಹಲವು ಕಾರ್ಯಕ್ರಮಗಳಲ್ಲಿ ಜಗನ್ ಮೋಹನ್ ರೆಡ್ಡಿ ಪಾಲ್ಗೊಂಡರು. ಶ್ರೀ ವೆಂಕಟೇಶ್ವರ ಸ್ವಾಮಿಗೆ ರೇಷ್ಮೆ ವಸ್ತ್ರ ಸಮರ್ಪಿಸಿ, ಗರುಡ ಸೇವೆಯಲ್ಲಿ ಭಾಗಿಯಾದರು.
ಇಲ್ಲಿನ ಸಂಪ್ರದಾಯದಂತೆ ರೇಷ್ಮೆ ವಸ್ತ್ರ ಇಟ್ಟಿದ್ದ ಬೆಳ್ಳಿಯ ಹರಿವಾಣವನ್ನು ತಲೆಯ ಮೇಲಿಟ್ಟುಕೊಂಡ ಸಿಎಂ ಜಗನ್ ಮೋಹನ್ ರೆಡ್ಡಿ, ಅದನ್ನು ಪುರೋಹಿತರು ಮತ್ತು ಟಿಟಿಡಿ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಇಂದು ಮತ್ತೆ ತಿಮ್ಮಪ್ಪನ ದರ್ಶನ ಪಡೆದ ಜಗನ್, ಸುಂದರ ಕಾಂಡ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಂತರ ಕರ್ನಾಟಕ ಭವನಕ್ಕೆ ನಡೆಯಲಿರುವ ಶಿಲಾನ್ಯಾಸ ಸಮಾರಂಭದಲ್ಲೂ ಭಾಗವಹಿಸಿ, ಅಮರಾವತಿಗೆ ಪ್ರಯಾಣ ಬೆಳೆಸಲಿದ್ದಾರೆ.