ಥಾಣೆ (ಮಹಾರಾಷ್ಟ್ರ): ಮುಂಬೈ ಮೂಲದ 29 ವರ್ಷದ ವ್ಯಕ್ತಿಯ ಶವ ವಾಶಿಯ ಸಾರ್ವಜನಿಕ ಆಸ್ಪತ್ರೆಯಿಂದ ನಾಪತ್ತೆಯಾಗಿದೆ.
ಎನ್‌ಎಂಎಂಸಿ ನಡೆಸುತ್ತಿರುವ ಈ ಆಸ್ಪತ್ರೆಯ ಶವಾಗಾರದಿಂದ ಶವ ಕಾಣೆಯಾಗಿದೆ ಎಂಬ ಬಗ್ಗೆ ಮೃತರ ಸಂಬಂಧಿಕರು ಮತ್ತು ಆಸ್ಪತ್ರೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ತನಿಖೆ ಮುಗಿದ ನಂತರವೇ ಮಾಹಿತಿ ಲಭ್ಯವಾಗುತ್ತದೆ ಎಂದು ವಾಶಿ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಸಂಜೀವ್ ಧುಮಾಲ್ ಹೇಳಿದ್ದಾರೆ.
29 ವರ್ಷದ ಯುವಕನ ಶವವನ್ನು ಕೋವಿಡ್ ಪರೀಕ್ಷೆ ಸಂಬಂಧ ಮೇ 8ರಂದು ಎನ್‌ಎಂಎಂಸಿ ಆಸ್ಪತ್ರೆಗೆ ಹಸ್ತಾಂತರಿಸಲಾಗಿದ್ದು, ಶವವನ್ನು ವಶಕ್ಕೆ ಪಡೆಯಲು ನಾಲ್ಕು ದಿನಗಳ ನಂತರ ಬರಲು ಸಂಬಂಧಿಕರಿಗೆ ತಿಳಿಸಲಾಗಿತ್ತು. ಅದರಂತೆ ನಾಲ್ಕು ದಿನಗಳ ನಂತರ ಶವವನ್ನು ತೆಗೆದುಕೊಂಡು ಬರಲು ಆಸ್ಪತ್ರೆಗೆ ಪೋಷಕರು ಬಂದಾಗ ಶವ ನಾಪತ್ತೆಯಾಗಿರುವುದು ತಿಳಿದು ಬೆಚ್ಚಿಬಿದ್ದಿದ್ದಾರೆ.