ಕೋಲ್ಕತಾ: ಸ್ವಾತಂತ್ರ್ಯೋತ್ಸವ ದಿನಾಚರಣೆಯ ಹಿನ್ನೆಲೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ಸಂಬಂಧ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಬೆಂಬಲಿಗರೊಂದಿಗೆ ನಡೆದ ಘರ್ಷಣೆಯಲ್ಲಿ ಬಿಜೆಪಿ ಸದಸ್ಯರೊಬ್ಬರು ಮೃತಪಟ್ಟಿದ್ದಾರೆ.
ಹೂಗ್ಲಿ ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸುದರ್ಶನ್ ಪ್ರಮಾಣಿಕ್ ಮೃತಪಟ್ಟ ಬಿಜೆಪಿ ಮುಖಂಡ ಎಂದು ತಿಳಿದು ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಮೂಲಗಳ ಪ್ರಕಾರ ಈವರೆಗೆ ಯಾರನ್ನೂ ಬಂಧಿಸಿರುವ ವರದಿಯಾಗಿಲ್ಲ.
ಎರಡೂ ಪಕ್ಷದ ಕಚೇರಿಗಳು ಒಂದೇ ಪ್ರದೇಶದಲ್ಲಿರುವುದರಿಂದ ರಾಷ್ಟ್ರಧ್ವಜವನ್ನು ಹಾರಿಸಲು ಎರಡೂ ಕಡೆಯವರು ಜಮಾಯಿಸಿದ್ದರಂತೆ. ಈ ವೇಳೆ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆದಿದ್ದರಿಂದ ಈ ಘರ್ಷಣೆ ಸಂಭವಿಸಿದೆ ಎನ್ನಲಾಗುತ್ತಿದೆ.
ಘಟನೆ ಖಂಡಿಸಿ ಸ್ಥಳೀಯರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಇನ್ನು ರಾಜ್ಯ ಬಿಜೆಪಿ ಘಟಕವು ಈ ಘಟನೆಯನ್ನು ಖಂಡಿಸಿದ್ದು, ಹಿಂಸಾಚಾರಕ್ಕೆ ಕಾರಣರಾದವರನ್ನು ಬಂಧಿಸುವಂತೆ ಪೊಲೀಸರನ್ನು ಒತ್ತಾಯಿಸಿದೆ.