ನವದೆಹಲಿ : 2014ರ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಕ್ಷೇತ್ರಗಳಿಗಿಂತಲೂ ಈ ಸಲ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ದಾಖಲು ಮಾಡುತ್ತೇವೆಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಅವರು, ಎನ್ಡಿಎ ಸರ್ಕಾರದ ಸಾಧನೆ, ನೋಟ್ ಬ್ಯಾನ್, ಪಕ್ಷದ ಮುಂದಿನ ನಡೆ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ಕಳೆದ ಐದು ವರ್ಷದಲ್ಲಿ ಉತ್ತಮ ಆಡಳಿತ ನೀಡಿರುವ ಸಂತೃಪ್ತಿ ನನ್ನಲ್ಲಿದೆ. ಈ ಐದು ವರ್ಷಗಳಲ್ಲಿ ನನ್ನಲ್ಲಿರುವ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ಭಾರತ ಅಭಿವೃದ್ಧಿ ಕಾಣುತ್ತಿರುವ ದೇಶಗಳ ಸಾಲಿನಲ್ಲಿ ನಿಂತಿದ್ದು, ಅಭಿವೃದ್ದಿಗೆ ಪೂರಕವಾದ ಎಲ್ಲ ಮಾರ್ಗಗಳನ್ನ ಇಂದು ಕಂಡುಕೊಂಡಿದ್ದೇವೆ ಎಂದರು. ನಾನು ಪ್ರಧಾನಿ ಹುದ್ದೆ ಅಲಂಕರಿಸಿದಾಗ ದೇಶದ ಸ್ಥಿತಿ ತುಂಬಾ ಕೆಟ್ಟಿತ್ತು. ಪ್ರಧಾನಿ ಹುದ್ದೆಗೆ ನಾನು ಹೊಸಬನಾಗಿದ್ದೆ. ನಾನು ಕ್ರಮಕೈಗೊಳ್ಳಲು ಶುರುಮಾಡಿದಂತೆ ಹೊಸ ಹೊಸ ಪರೀಕ್ಷೆಗಳು ನಮಗೆ ಎದುರಾದವು. ಆದರೆ, ನಾನು ಮುಖ್ಯಮಂತ್ರಿಯಾಗಿ ಕಳೆದ ದಿನಗಳು ನನಗೆ ಇಲ್ಲಿ ತುಂಬಾ ಉಪಯೋಗಕ್ಕೆ ಬಂದವು ಎಂದು ತಿಳಿಸಿದ್ದಾರೆ.
ನೋಟ್ ಬ್ಯಾನ್ ನಿರ್ಣಯ ನಿಜಕ್ಕೂ ನಮ್ಮ ಸರ್ಕಾರದ ದೊಡ್ಡ ಸಾಧನೆ. ಅದರ ಫಲಿತಾಂಶ ಹೊರಬಂದಾಗ ಭ್ರಷ್ಟಾಚಾರ ಮಾಡಿದವರು ಕೈಸುಟ್ಟುಕೊಳ್ಳುವಂತಾಯಿತು. ಈ ವೇಳೆ ನಮಗೆ ಬರೋಬ್ಬರಿ 1.30,000 ಕೋಟಿ ಹಣ ತೆರಿಗೆ ರೂಪದಲ್ಲಿ ಹರಿದು ಬಂತು. 50,000 ಕೋಟಿ ಹಣ ವಶಕ್ಕೆ ತೆಗೆದುಕೊಳ್ಳಲಾಯಿತು. ಇದೇ ವೇಳೆ ಬರೋಬ್ಬರಿ 3,38,000 ಶೆಲ್ ಕಂಪನಿ ಮುಚ್ಚಲಾಗಿದ್ದು, 6,900 ಬೇನಾಮಿ ಆಸ್ತಿ ವಶಕ್ಕೆ ಪಡೆದುಕೊಳ್ಳಲಾಯಿತು ಎಂದು ತಿಳಿಸಿದ್ದಾರೆ.