ಕೋಲ್ಕತಾ : ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಬಿಜೆಪಿ ತನ್ನ 'ಪರಿವರ್ತನ ಯಾತ್ರೆ'ಗೆ ಇಂದು ಪರ್ಯಾಯ ಮಾರ್ಗ ಆಯ್ಕೆ ಮಾಡಿಕೊಂಡಿದೆ. ಈ ಯಾತ್ರೆಗೆ ಹೋಗುವ ಮಾರ್ಗವನ್ನು ಮುಂಚಿತವಾಗಿ ಪಕ್ಷವು ಸ್ಥಳೀಯ ಆಡಳಿತಕ್ಕೆ ತಿಳಿಸಿತ್ತು ಎಂದು ಜಿಲ್ಲಾ ಬಿಜೆಪಿ ಮುಖಂಡ ಗೌರಿಶಂಕರ್ ಘೋಷ್ ಮಾಹಿತಿ ನೀಡಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆ ಹೇಗಾದರೂ ಸರಿ ಕಮಲ ಅರಳಿಸಬೇಕು ಎಂದುಕೊಂಡಿರುವ ಬಿಜೆಪಿ, ವಿವಿಧ ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸುತ್ತಿದೆ. ಅದರಂತೆ, ಫೆಬ್ರವರಿ 6ರಂದು ನಾಡಿಯಾ ಜಿಲ್ಲೆಯ ನಬಾದ್‌ವಿಪ್‌ನಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು 'ಪರಿವರ್ತನ ಯಾತ್ರೆ'ಗೆ ಹಸಿರು ನಿಶಾನೆ ತೋರಿಸಿದರು. ಫೆಬ್ರವರಿ 7ರಂದು ಮುರ್ಷಿದಾಬಾದ್‌ಗೆ ಯಾತ್ರೆ ಪ್ರವೇಶಿಸುವ ಮುನ್ನ ನಕಸಿಪರ ಮೂಲಕ ಯಾತ್ರೆ ಪ್ರಯಾಣ ಆರಂಭಿಸಿದೆ.
ಪಕ್ಷದ ಸದಸ್ಯರು, ಕೇಸರಿ ಉಡುಪಿನಲ್ಲಿ ಮಿಂಚುತ್ತಿದ್ದು, ಸಾಮಾನ್ಯ ಜನರಿಗೆ ದಾರಿಯುದ್ದಕ್ಕೂ ತಮ್ಮ ಪಕ್ಷದ ಬಗ್ಗೆ ಹಾಗೂ ಆಡಳಿತದ ಬಗ್ಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಯಾತ್ರೆಯ ಭಾಗವಾಗಿ ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಎತ್ತಿ ತೋರಿಸುವ ಕರಪತ್ರಗಳನ್ನು ವಿತರಿಸುತ್ತಿದ್ದಾರೆ. ಎಸಿ ವ್ಯಾನ್ ರಥವಾಗಿ ಪರಿವರ್ತನೆಗೊಂಡಿದ್ದು, ಅದರ ಮೇಲೆ ಬಿಜೆಪಿ ನಾಯಕರ ಚಿತ್ರಗಳು ಎಲ್ಲರನ್ನು ಆಕರ್ಷಿಸುತ್ತಿವೆ.
ಬಹರಂಪುರಕ್ಕೆ ತೆರಳುತ್ತಿದ್ದ ಯಾತ್ರೆಗೆ, ಕೆಲವು ಸೂಕ್ಷ್ಮ ಪ್ರದೇಶಗಳ ನಿರ್ದಿಷ್ಟ ಮಾರ್ಗವನ್ನು ಬದಲಾಯಿಸಲು ತಿಳಿಸಲಾಯಿತು. ಹಾಗೆ ಜಿಲ್ಲೆಯ ಬೆಲ್ಡಂಗದಲ್ಲಿ ಭಾರತ್ ಸೇವಾಶ್ರಮ ಸಂಘದ ಬಳಿ ಹಾದು ಹೋಗುತ್ತಿದ್ದಾಗ, ವಾಹನವನ್ನು ತಡೆದು ನಿಲ್ಲಿಸಲಾಯಿತು ಎಂದು ಈ ಸಂಬಂಧ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ರಾಜ್ಯ ಬಿಜೆಪಿ ನಾಯಕ ಕಲ್ಯಾಣ್ ಚೌಬೆ ಪ್ರತಿಕ್ರಿಯಿಸಿದ್ದು, ಯಾತ್ರೆ ಮಾರ್ಗವನ್ನು ನಿಗದಿಪಡಿಸುವ ಮೊದಲು ನಾವು ಪೊಲೀಸರೊಂದಿಗೆ ಚರ್ಚೆ ನಡೆಸಿದ್ದೇವೆ. ಆದಾಗ್ಯೂ, ಪೊಲೀಸರು ನಮ್ಮನ್ನು ಬೆಲ್ಡಂಗಾದಲ್ಲಿ ನಿಲ್ಲಿಸಿದಾಗ ನಾವು ಆಶ್ಚರ್ಯಚಕಿತರಾದೆವು. ನಾವು ಕನಿಷ್ಠ ಮೂರು ಗಂಟೆಗಳ ಕಾಲ ಬೀದಿಯಲ್ಲಿ ಕುಳಿತಿದ್ದೇವೆ ಎಂದಿದ್ದಾರೆ.
ಪೊಲೀಸರು ಸೂಚಿಸಿದಂತೆ, ಯಾವುದೇ ಅಹಿತಕರ ಪರಿಸ್ಥಿತಿ ನಡೆಯದಂತೆ ರಾಷ್ಟ್ರೀಯ ಹೆದ್ದಾರಿ 34ರ ಬೈಪಾಸ್ ಮೂಲಕ ಪರ್ಯಾಯ ಮಾರ್ಗ ತೆಗೆದುಕೊಳ್ಳಲು ನಾವು ನಿರ್ಧರಿಸಿದ್ದೇವೆ ಎಂದು ಚೌಬೆ ಹೇಳಿದ್ದಾರೆ.
ಮುಂದಿನ ಕೆಲವು ದಿನಗಳಲ್ಲಿ ಬಿಜೆಪಿಯ ಇನ್ನೂ ನಾಲ್ಕು ರಥಗಳು ರಸ್ತೆಗಿಳಿಯಲು ಸಜ್ಜಾಗಿವೆ. ಇವೆಲ್ಲವನ್ನೂ ಪಕ್ಷದ ಉನ್ನತ ನಾಯಕರು ಅನಾವರಣಗೊಳಿಸುವ ಸಾಧ್ಯತೆ ಇದೆ. ಈ ರ್ಯಾಲಿಗಳು ಎಲ್ಲಾ 294 ಕ್ಷೇತ್ರಗಳನ್ನು ತಲುಪುವ ಮೂಲಕ ಇಡೀ ರಾಜ್ಯ ಸುತ್ತುವರಿಯಲಿವೆ ಎಂಬ ನಿರೀಕ್ಷೆಯಿದೆ. ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ.