ಭುವನೇಶ್ವರ: ಕೊರೊನಾ ಸೋಂಕಿಗೆ ಒಳಗಾಗಿದ್ದ ಬಿಜು ಜನತಾದಳದ (ಬಿಜೆಡಿ) ಹಿರಿಯ ಮುಖಂಡ, ಮಾಜಿ ಸಚಿವ ಮತ್ತು ಹಾಲಿ ಶಾಸಕ ಪ್ರದೀಪ್ ಮಹಾರತಿ (65) ಒಡಿಶಾದ ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಸೆಪ್ಟೆಂಬರ್ 14 ರಂದು ಪ್ರದೀಪ್ ಮಹಾರತಿ ಅವರಿಗೆ ಕೊರೊನಾ ಸೋಂಕು ತಗುಲಿದ್ದು ದೃಢಪಟ್ಟಿದ್ದು, ಎಸ್‌ಯುಎಂ ಅಲ್ಟಿಮೇಟ್ ಮೆಡಿಕೇರ್ನಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದರು. ಶುಕ್ರವಾರದಿಂದ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದ ಮಹಾರತಿ ಶನಿವಾರ ತಡರಾತ್ರಿ ನಿಧನರಾಗಿದ್ದಾರೆ.
1955ರ ಜುಲೈ 4 ರಂದು ಒಡಿಶಾದ ಪುರಿ ಜಿಲ್ಲೆಯಲ್ಲಿ ಜನಿಸಿದ ಪ್ರದೀಪ್ ಮಹಾರತಿ, 1985 ರಿಂದ ಸತತ ಏಳು ಬಾರಿ ಪಿಪಿಲಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಅಲ್ಲದೇ ಇವರು ಪಂಚಾಯತ್ ರಾಜ್ ಮತ್ತು ಕುಡಿಯುವ ನೀರು ಸರಬರಾಜು, ಕೃಷಿ ಮತ್ತು ಮೀನುಗಾರಿಕೆಯಂತಹ ಪ್ರಮುಖ ಖಾತೆಗಳನ್ನು ಸಚಿವರಾಗಿ ನಿರ್ವಹಿಸಿದ್ದರು.
ಮಹಾರತಿ ಅವರ ಅಕಾಲಿಕ ನಿಧನಕ್ಕೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.