ಉತ್ತರಾಖಂಡ: ಹಕ್ಕಿ ಜ್ವರ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಜಿಲ್ಲಾ ಮಟ್ಟದಲ್ಲಿ ತಂಡಗಳನ್ನು ರಚಿಸಿ ತರಬೇತಿ ನೀಡುವಂತೆ ಉತ್ತರಾಖಂಡ ಆರೋಗ್ಯ ಇಲಾಖೆ ಎಲ್ಲಾ ಮುಖ್ಯ ವೈದ್ಯಕೀಯ ಅಧಿಕಾರಿಗಳಿಗೆ ಸಲಹೆ ನೀಡಿದೆ.
ಈಗಾಗಲೇ ಕೊರೊನಾದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆಯೇ ಹಕ್ಕಿ ಜ್ವರದ ಭೀತಿ ಉಂಟಾಗಿದ್ದು, ಈ ಬಗ್ಗೆ ಸಂಪೂರ್ಣ ಎಚ್ಚರಿಕೆ ವಹಿಸುವಂತೆ ಮುಖ್ಯ ವೈದ್ಯಕೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಹಕ್ಕಿ ಜ್ವರಕ್ಕೆ ಸಂಬಂಧಿಸಿದಂತೆ ಉತ್ತರಾಖಂಡ ಆರೋಗ್ಯ ನಿರ್ದೇಶಕಿ ಡಾ.ಅಮಿತಾ ಉಪ್ರೆತಿ ಅವರು ಮುಖ್ಯ ವೈದ್ಯಕೀಯ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಭೋಪಾಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ ರಾಜಸ್ಥಾನದಲ್ಲಿ ಏವಿಯನ್ ಇನ್ಫ್ಲುಯೆನ್ಸ ವೈರಸ್ ಇರುವುದನ್ನು ಹಲವಾರು ಕಾಗೆಗಳು ಸತ್ತ ನಂತರ ದೃಢಪಡಿಸಿದೆ. ಈಗಾಗಲೇ ರಾಜ್ಯಗಳಿಗೆ ಹಕ್ಕಿಜ್ವರ ಎಚ್ಚರಿಕೆಯನ್ನು ನೀಡಿದೆ. ಆದ್ದರಿಂದ ಕೆಲವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ ಎಂದು ತಿಳಿಸಿದ್ದಾರೆ.
ಇನ್ನು ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಹಕ್ಕಿ ಜ್ವರದ ಪ್ರಕರಣಗಳು ದೃಢಪಟ್ಟಿದೆ ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ತಿಳಿಸಿದೆ.