ನಳಂದ(ಬಿಹಾರ): ಕೊರೊನಾ ವೈರಸ್ ಹರಡುವುದನ್ನು ತಡೆಯುವ ದೃಷ್ಟಿಯಿಂದ, ದೇಶಾದ್ಯಂತ ಲಾಕ್‌ಡೌನ್ ವಿಧಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಕೊರೊನಾ ವಿರುದ್ಧ ಗೆಲ್ಲುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಬಿಹಾರದ ನಳಂದ ಜಿಲ್ಲೆಯಲ್ಲಿ 6 ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಂತೆ ಜಿಲ್ಲಾ ಆರೋಗ್ಯ ಇಲಾಖೆ ಕಾರ್ಯಾಚರಣೆಗೆ ಇಳಿಯಿತು. ಪೋಲಿಯೋ ಅಭಿಯಾನದಂತೆಯೇ ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸಿದ ರಾಜ್ಯ ಸರ್ಕಾರ ಮನೆ ಬಾಗಿಲಿಗೆ ತೆರಳಿ ತಪಾಸಣೆ ನಡೆಸಲು ಪ್ರಾರಂಭಿಸಿತು. ವೈದ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರನ್ನು ಒಳಗೊಂಡ ಸುಮಾರು 1,459 ತಂಡಗಳು ನಳಂದ, ಬೆಗುಸರಾಯ್, ನವಾಡಾ ಮತ್ತು ಸಿವಾನ್ ಜಿಲ್ಲೆಗಳಲ್ಲಿ ಕಾರ್ಯಾಚರಣೆಗೆ ಇಳಿದಿವೆ. ಜಿಲ್ಲೆಯ ಎಲ್ಲ ಜನರ ಬಗ್ಗೆ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವುದು. ಕೊರೊನಾ ರೋಗ ಲಕ್ಷಣಗಳನ್ನು ಹೊಂದಿರುವವರನ್ನು ಗುರುತಿಸುವುದು ಈ ತಂಡದ ಕೆಲಸವಾಗಿದೆ.
ಈ ತಂಡಗಳು ಪ್ರತಿದಿನ ಸಂಜೆ ತಾವು ಸಂಗ್ರಹಿಸಿದ ವರದಿಗಳನ್ನು ಆಯಾ ಮೇಲ್ವಿಚಾರಕರಿಗೆ ಕಳುಹಿಸುತ್ತವೆ. ಜಿಲ್ಲಾ ಆರೋಗ್ಯ ಅಧಿಕಾರಿ, ಜಿಲ್ಲಾ ಆರೋಗ್ಯ ಸಮಿತಿ ಮತ್ತು ಜಿಲ್ಲಾ ಸರ್ಜನ್ ಈ ವರದಿಗಳ ಬಗ್ಗೆ ಗಮನ ಹರಿಸಿ ಜಿಲ್ಲಾಧಿಕಾರಿಗೆ ಕಳುಹಿಸುತ್ತಾರೆ.
ಮನೆ ಮನೆ ಅಭಿಯಾನದ ಅಡಿಯಲ್ಲಿ ಶನಿವಾರವರೆಗೆ 12,23,000 ಮನೆಗಳನ್ನು ಸಮೀಕ್ಷೆ ಮಾಡಲಾಗಿದೆ. ಈ ಪೈಕಿ 711 ಜನರಲ್ಲಿ ಜ್ವರ ಮತ್ತು ಕೆಮ್ಮು ಸಮಸ್ಯೆ ಪತ್ತೆಯಾಗಿದೆ. ಇವು ಕೊರೊನಾ ವೈರಸ್‌ನ ಲಕ್ಷಣಗಳಾಗಿರುವುದರಿಂದ, ಎಲ್ಲಾ 711 ಜನರನ್ನು ಪರೀಕ್ಷಿಸಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಈ ಸಮೀಕ್ಷೆಯನ್ನು ಪೂರ್ಣಗೊಳಿಸಿದ ನಂತರ, ಕೋವಿಡ್-19 ರೋಗಿಗಳ ಸಂಪೂರ್ಣ ಮಾಹಿತಿ ಸಿಗುತ್ತದೆ. ಅದರ ಆಧಾರದ ಮೇಲೆ ಅಗತ್ಯ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗುತ್ತದೆ ಎಂದು ಬಿಹಾರ ಸರ್ಕಾರ ಹೇಳಿದೆ. ಈ ಮಧ್ಯೆ ಕೊರೊನಾ ವಿರುದ್ಧದ ಹೋರಾಟದಲ್ಲಿ ನಳಂದ ಜಿಲ್ಲೆಯ ಪ್ರಯತ್ನಗಳು ಬಹಳ ಪರಿಣಾಮಕಾರಿ ಆಗಿವೆ ಎಂದು ಸಾಬೀತಾಗಿದ್ದು, ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.