ಪಾಟ್ನಾ: ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ನಾಳೆ ಬಹಿರಂಗಗೊಳ್ಳಲಿದ್ದು, ಈ ಮೂಲಕ ಎನ್ಡಿಎ ಹಾಗೂ ಮಹಾಘಟಬಂಧನ್ ಪೈಕಿ ಬಿಹಾರ ಗದ್ದುಗೆ ಯಾರ ಪಾಲಾಗಲಿದೆ ಎಂಬ ಮಾಹಿತಿ ಮಧ್ಯಾಹ್ನದ ಹೊತ್ತಿಗೆ ಬಹಿರಂಗಗೊಳ್ಳಲಿದೆ.
243 ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಅಕ್ಟೋಬರ್ 27, ನವೆಂಬರ್ 3 ಹಾಗೂ ನವೆಂಬರ್ 7ರಂದು ವೋಟಿಂಗ್ ನಡೆದಿದೆ. ಈಗಾಗಲೇ ಹೊರಬಿದ್ದಿರುವ ಚುನಾವಣೋತ್ತರ ಸಮೀಕ್ಷೆ ಪ್ರಕಾರ ತೇಜಸ್ವಿ ಯಾದವ್ ಮಹಾಘಟಬಂಧನ್ ಮುನ್ನಡೆ ಸಾಧಿಸಿದ್ದು, ಕೆಲವೊಂದು ಸಮೀಕ್ಷೆಗಳ ಪ್ರಕಾರ ಅತಂತ್ರ ಸ್ಥಿತಿ ನಿರ್ಮಾಣಗೊಂಡಿದೆ. ನಾಳೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದ್ದು, 38 ಜಿಲ್ಲೆಗಳ 55 ಕೇಂದ್ರಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಈಗಾಗಲೇ ಮತಗಟ್ಟೆಗಳ ಸುತ್ತಲೂ ಭಾರಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಕೊರೊನಾ ವೈರಸ್ ಸಮಯದಲ್ಲಿ ಈ ಚುನಾವಣೆ ನಡೆದಿರುವ ಕಾರಣ ಫಲಿತಾಂಶ ಬಹಿರಂಗಗೊಳ್ಳಲು 3-4 ಗಂಟೆ ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೆ ಕಾರಣ ವಿದ್ಯುನ್ಮಾನ ಮತಯಂತ್ರಗಳ ಸಂಖ್ಯೆ ಹೆಚ್ಚಾಗಿರುವುದೇ ಕಾರಣವಾಗಿದೆ.
ಪ್ರಮುಖವಾಗಿ ತೇಜಸ್ವಿ ಯಾದವ್ ವೈಶಾಲಿ ಜಿಲ್ಲೆಯ ರಾಘವ್ಪುರ್ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಇವರ ಸಹೋದರ ತೇಜ್ ಪ್ರತಾಪ್ ಯಾದವ್ ಸಮಷ್ಟಿಪುರದ ಹಸನ್ಪುರದಿಂದ ಕಣಕ್ಕಿಳಿದಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟ ಚಿತ್ರಣ ಬಹಿರಂಗಗೊಳ್ಳುವ ಸಾಧ್ಯತೆ ದಟ್ಟವಾಗಿದ್ದು, ಎರಡನೇ ಅವಧಿಗೆ ಸಿಎಂ ಗಾದಿ ಮೇಲೆ ಕಣ್ಣಿಟ್ಟಿರುವ ನಿತೀಶ್ ಕುಮಾರ್ಗೆ ಈ ಚುನಾವಣೆ ಕೊನೆಯದಾಗಿರುವ ಕಾರಣ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಮೂರು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 3,733 ಅಭ್ಯರ್ಥಿಗಳಿದ್ದು, ಇದರಲ್ಲಿ 371 ಮಹಿಳಾ ಅಭ್ಯರ್ಥಿಗಳು ಇದ್ದಾರೆ. ಇದರಲ್ಲಿ 1,157 ಅಭ್ಯರ್ಥಿಗಳಿಗೆ ಅಪರಾಧ ಹಿನ್ನೆಲೆ ಇದೆ.