ಪಾಟ್ನಾ: ಬಿಹಾರದ 16 ಜಿಲ್ಲೆಗಳಲ್ಲಿ ಮಂಗಳವಾರವೂ ಭೀಕರ ಪ್ರವಾಹ ಮುಂದುವರೆದಿದ್ದು, ಸಾವಿನ ಸಖ್ಯೆ 24ಕ್ಕೆ ಏರಿಕೆಯಾಗಿದೆ. ಸುಮಾರು 75 ಲಕ್ಷ ಜನರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬಿಹಾರ ಸರ್ಕಾರ ತಿಳಿಸಿದೆ.
ದರ್ಭಂಗದಲ್ಲಿ 10 ಜನರು ಸಾವನ್ನಪ್ಪಿದ್ದರೆ, ಮುಜಾಫರ್ಪುರದಲ್ಲಿ 6, ಚಂಪಾರಣ್ನಲ್ಲಿ 4, ಸರನ್ನಲ್ಲಿ ಇಬ್ಬರು ಮತ್ತು ಸಿವಾನ್ನಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಬಿಹಾರ ಸರ್ಕಾರದ ಮಾಹಿತಿ ಪ್ರಕಾರ ಒಟ್ಟು 75,02,621 ಜನರು ಪ್ರವಾಹ ಪೀಡಿತರಾಗಿದ್ದಾರೆ.
ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ (ಎನ್‌ಡಿಆರ್‌ಎಫ್) 33 ತಂಡಗಳನ್ನು ರಾಜ್ಯಾದ್ಯಂತ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ. 12,479ಕ್ಕೂ ಹೆಚ್ಚು ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಶನಿವಾರ, ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾಗಲ್ಪುರ್, ದರ್ಭಂಗ, ಪೂರ್ಣಿಯಾ, ಮುಂಗರ್ ಮತ್ತು ಕೋಸಿ ವಿಭಾಗಗಳ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ಕೈಗೊಂಡಿದ್ದರು.
ಈ ಪ್ರದೇಶಗಳಲ್ಲಿನ ಕೋವಿಡ್-19 ಪರಿಸ್ಥಿತಿಯನ್ನು ಸಹ ಪರಿಶೀಲಿಸಿದ್ದರು. ಪ್ರಧಾನಿ ಮೋದಿ ಜೊತೆ ರಾಜ್ಯದ ಪ್ರವಾಹ ಪರಿಸ್ಥಿತಿ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿವರಣೆ ನೀಡಿದ ಸಿಎಂ "ವಿವಿಧ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳು ಮತ್ತು ಕೋಸಿ ನದಿಯ ಪೂರ್ವದ ಒಡ್ಡುಗಳ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸಲಾಗಿದೆ" ಎಂದು ಅವರು ಇದೇ ವೇಳೆ ತಿಳಿಸಿದರು.