ಹೈದರಾಬಾದ್ : ಜಗತ್ತು ಅಮೆರಿಕದ ನೂತನ ಅಧ್ಯಕ್ಷರಾಗಲಿರುವ ಜೋ ಬೈಡನ್ ಅವರ ಭಾಷಣಕ್ಕೆ ಕಾತರದಿಂದ ಕಾಯುತ್ತಿದೆ. ಈ ಬೆನ್ನಲ್ಲೇ ಸಂತಸದ ಸುದ್ದಿಯೊಂದು ಹೊರ ಬಿದ್ದಿದೆ. ಜೋ ಬೈಡನ್ ಅವರಿಗೆ ಭಾಷಣ ಬರೆದು ಕೊಡುವುದರಲ್ಲಿ ಭಾರತೀಯ ಮೂಲದವರೊಬ್ಬರ ಪಾತ್ರ ಬಹಿರಂಗವಾಗಿದೆ.
ತೆಲಂಗಾಣದ ಕರೀಂನಗರ ಜಿಲ್ಲೆಯ ಹೈದರಾಬಾದ್ನಿಂದ 200 ಕಿಲೋಮೀಟರ್ ದೂರದಲ್ಲಿರುವ ಪೋತಿರೆಡ್ಡಿಪೇಟ ಗ್ರಾಮದ ಮೂಲದವರಾದ ಚೆಲ್ಲೋಟಿ ವಿನಯ್ ರೆಡ್ಡಿ ಅಮೆರಿಕದ ಅಧ್ಯಕ್ಷರ ಭಾಷಣ ರಚಿಸುವ ವಿಭಾಗದ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.
ಚೆಲ್ಲೋಟಿ ವಿನಯ್ ರೆಡ್ಡಿ ಅವರ ತಂದೆ ನಾರಾಯಣ ರೆಡ್ಡಿ ಪೋತಿರೆಡ್ಡಿಪೇಟ ಗ್ರಾಮದಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ, ಹೈದರಾಬಾದ್ನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದರು. ನಂತರ 1970ರಲ್ಲಿ ಅಮೆರಿಕಕ್ಕೆ ವಲಸೆ ಹೋಗಿ ಅಲ್ಲಿಯೇ ವಾಸವಿದ್ದರು.
ಇದನ್ನೂ ಓದಿ: ಅಮೆರಿಕ ಯಶಸ್ಸಿನಲ್ಲಿ ಭಾರತದ ಪಾತ್ರ ಪ್ರಮುಖ: ಆ್ಯಂಟನಿ ಬ್ಲಿಂಕೆನ್
ವಿನಯ್ ರೆಡ್ಡಿ ಅಮೆರಿಕದಲ್ಲೇ ಹುಟ್ಟಿ ಬೆಳೆದಿದ್ದು, ತಮ್ಮ ಪೂರ್ವಜರ ಊರಾದ ಪೋತಿರೆಡ್ಡಿಪೇಟದೊಂದಿಗೆ ಅನೋನ್ಯ ಸಂಬಂಧ ಕೂಡ ಹೊಂದಿದ್ದರು. ಈಗಲೂ ಸಹ ಈ ಗ್ರಾಮದಲ್ಲಿ ಮೂರು ಎಕರೆ ಭೂಮಿ ಹಾಗೂ ಮನೆ ಹೊಂದಿದ್ದಾರೆ.
ನಾರಾಯಣ ರೆಡ್ಡಿ ಮತ್ತು ಅವರ ಪತ್ನಿ ಆಗಾಗ ಈ ಗ್ರಾಮಕ್ಕೆ ಭೇಟಿ ನೀಡಿ, ಸಂಬಂಧಿಗಳು, ಸ್ನೇಹಿತರು ಹಾಗೂ ಗ್ರಾಮಸ್ಥರೊಂದಿಗೆ ಒಡನಾಟ ಉಳಿಸಿಕೊಂಡಿದ್ದಾರೆ. 2020ರ ಫೆಬ್ರವರಿಯಲ್ಲಿ ನಾರಾಯಣಗೌಡರು ಗ್ರಾಮಕ್ಕೆ ಕೊನೆಯದಾಗಿ ಭೇಟಿ ನೀಡಿದ್ದರು.