ನವದೆಹಲಿ: 2018ರ ಭೀಮಾ-ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವರ್ಗಾವಣೆಯಾಗಿವೆ.
ಗುರುವಾರವಷ್ಟೇ ಮಹಾರಾಷ್ಟ್ರ ಸರ್ಕಾರ ಪ್ರಕರಣದ ಸೂಕ್ಷ್ಮ ಸ್ಥಿತಿಗತಿ, ತನಿಖೆ ಕುರಿತು ಪೊಲೀಸರೊಂದಿಗೆ ಪರಿಶೀಲನಾ ಸಭೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಶುಕ್ರವಾರ ನಡೆದ ದಿಢೀರ್ ಬೆಳವಣಿಗೆಯಲ್ಲಿ ಪ್ರಕರಣವನ್ನು ಎನ್ಐಎಗೆ ವರ್ಗಾಯಿಸಲಾಗಿದೆ.
ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಗೃಹ ಸಚಿವ ಅನಿಲ್ ದೇಶಮುಖ್ ಈ ಪ್ರಕರಣಗಳ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕ ಸುಬೋಧ್ ಜೈಸ್ವಾಲ್ ಮತ್ತು ರಾಜ್ಯ ಗುಪ್ತಚರ ಇಲಾಖೆ ಆಯುಕ್ತ ರಶ್ಮಿ ಶುಕ್ಲಾ ಅವರೊಂದಿಗೆ ಪರಿಶೀಲನಾ ಸಭೆ ನಡೆಸಿದ್ದರು. ಅದರ ಬೆನ್ನಲ್ಲೇ ಈ ಪ್ರಕರಣಗಳ ತನಿಖೆಯನ್ನು ಎನ್‌ಐಎ ವಹಿಸಿಕೊಂಡಿರುವ ಪರಿಣಾಮ ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರಗಳ ನಡುವೆ ಹೊಸದೊಂದು ಸಂಘರ್ಷ ಏರ್ಪಡುವ ಸಾಧ್ಯತೆ ಇದೆ.
2018ರ ಜನವರಿ 1ರಂದು ಭೀಮಾ-ಕೋರೆಗಾಂವ್ ವಿಜಯೋತ್ಸವದ 200ನೇ ವರ್ಷಾಚರಣೆ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಗಲಭೆಯಲ್ಲಿ ಹಲವರು ಗಾಯಗೊಂಡಿದ್ದಲ್ಲದೆ, ಭಾರೀ ಹಿಂಸಾಚಾರ ನಡೆದಿತ್ತು. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿತ್ತು. ನಂತರ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಹೇರಲಾಗಿತ್ತು.
ಭೀಮಾ-ಕೋರೆಂಗಾವ್ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಕವಿ ವರವರ ರಾವ್, ಸಾಮಾಜಿಕ ಕಾರ್ಯಕರ್ತರಾದ ಸುಧಾ ಭಾರದ್ವಾಜ್, ಗೌತಮ್ ನವಲಖಾ, ಅರುಣ್ ಫೆರೀರಾ ಮತ್ತು ವೆರ್ನಾನ್ ಗೊನ್ಸಾಲ್ವೆಸ್ ಸೇರಿದಂತೆ ಇನ್ನಿತರರನ್ನು ಪೊಲೀಸರು ಬಂಧಿಸಿದ್ದರು.