ಛತ್ತೀಸ್ಗಢ್: ಇಲ್ಲಿನ ದರ್ಗಾ ಜಿಲ್ಲೆ ಭಿಲೈ ನಿವಾಸಿ ಶ್ರದ್ಧಾ ಸಾಹು ಎಂಬ ಮಹಿಳೆ ಕಳೆದ 2 ವರ್ಷಗಳಿಂದ ಪ್ಲಾಸ್ಟಿಕ್ ಮುಕ್ತ ಪರಿಸರಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದ್ದು, ಇದಕ್ಕಾಗಿ ಕ್ರಾಕರಿ ಬ್ಯಾಂಕ್ ಅಂದ್ರೆ ಮಣ್ಣಿನ ಪಾತ್ರೆಗಳ ಬ್ಯಾಂಕ್ ಆರಂಭಿಸಿದ್ದಾರೆ.
ಕಳೆದ ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು ಕೆಂಪುಕೋಟೆ ಮೇಲೆ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಒಮ್ಮೆ ಬಳಸಿ ಬಿಸಾಡುವ ಸಿಂಗಲ್ ಯೂಸ್ ಪ್ಲಾಸ್ಟಿಕ್ ದೂರವಿಡುವಂತೆ ದೇಶದ ಜನತೆಗೆ ಕರೆ ನೀಡಿದ್ರು. ಆದ್ರೆ ಶ್ರದ್ದಾ ಸಾಹು, ಪ್ರಧಾನಿ ಮೋದಿ ಕರೆ ನೀಡುವುದಕ್ಕೂ ಮುನ್ನವೇ ಪ್ಲಾಸ್ಟಿಕ್‌ನಿಂದ ಆಗ್ತಿರೋ ಮಾಲಿನ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ಶ್ರದ್ಧಾ ಸಾಹು ಅವರ ಕ್ರಾಕರಿ ಬ್ಯಾಂಕ್ ಹೇಗೆ ಕಾರ್ಯ ನಿರ್ವಹಿಸುತ್ತೆ ಅನ್ನೋದನ್ನ ನೋಡೋದಾದ್ರೆ, ಕ್ರಾಕರಿ ಬ್ಯಾಂಕ್ ಮೂಲಕ ಇವರು ಸ್ಟೀಲ್ ಪಾತ್ರೆಗಳು ಹಾಗೂ ಲೋಟಗಳನ್ನು ಸಂಗ್ರಹಿಸಿಕೊಂಡಿದ್ದು, ಕೌಟುಂಬಿಕ ಸಭೆ, ಸಮಾರಂಭಗಳಿಗೆ ಈ ಪಾತ್ರೆಗಳನ್ನು ಯಾವುದೇ ಬಾಡಿಗೆ ಹಣ ಪಡೆಯದೆ ಉಚಿತವಾಗಿ ನೀಡುತ್ತಾರೆ. ತಮ್ಮ ಜಿಲ್ಲೆಯಲ್ಲಿ ಮಾತ್ರವಲ್ಲದೆ, ನೆರೆಹೊರೆಯ ಜಿಲ್ಲೆಗಳ ಜನರಿಗೂ ಈ ಪಾತ್ರೆಗಳನ್ನು ನೀಡುತ್ತಿದ್ದಾರಂತೆ. ಆ ಮೂಲಕ ಜನ ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ವಸ್ತುಗಳಿಂದ ದೂರ ಇರುವಂತೆ ಜಾಗೃತಿ ಮೂಡಿಸುತ್ತಿದ್ದಾರೆ.
ಈ ಬಗ್ಗೆ ತಮ್ಮ ಮನದಾಳ ಹಂಚಿಕೊಂಡಿರುವ ಶ್ರದ್ಧಾ, ಕಾರ್ಯಕ್ರಮದ ನಿಮಿತ್ತ ಪಾತ್ರೆಗಳನ್ನು ತೆಗೆದುಕೊಳ್ಳುವ ಜನರು ಮತ್ತೆ ಅವುಗಳನ್ನು ಸ್ವಚ್ಛಗೊಳಿಸಿ ವಾಪಸ್ ನೀಡುತ್ತಾರೆ ಅಂತ ಸಂತಸ ವ್ಯಕ್ತಪಡಿಸುತ್ತಾರೆ.
ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಪಣತೊಟ್ಟಿರುವ ಈ ಮಹಿಳೆಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೆ, ಕೆಲ ಶಾಲೆಗಳ ಶಿಕ್ಷಕರು ಇವರನ್ನು ಆಹ್ವಾನಿಸಿ ಏಕ ಬಳಕೆ ಪ್ಲಾಸ್ಟಿಕ್ ನಿಂದಾಗುವ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಿದ್ದಾರೆ.
ಒಟ್ಟಿನಲ್ಲಿ ಶ್ರದ್ಧಾ ಅವರ ಈ ಮಹತ್ವದ ಹೆಜ್ಜೆ ಪರಿಸರ ಸಂರಕ್ಷಣೆಗೆ ಮುಂದಾಗುವ ಯುವ ಪೀಳಿಗೆಗೆ ಸ್ಫೂರ್ತಿ. ಅಲ್ಲದೆ, ತಾವು ಪರಿಸರ ಸಂರಕ್ಷಣೆಗೆ ಮಾಡುತ್ತಿರುವ ಅಳಿಲು ಸೇವೆ ಹಸಿರೀಕರಣ ಹಾಗೂ ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಸಹಕಾರಿಯಾಗಿದೆ.