ನವದೆಹಲಿ: ಇಂದು ಬೆಳಗ್ಗೆಯಿಂದ ಭಾರತ್ ಬಯೋಟೆಕ್ ಸಂಸ್ಥೆಯು ದೇಶದ 22 ನಗರಗಳಿಗೆ 25 ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕೆಯನ್ನು ಸರಬರಾಜು ಮಾಡುತ್ತಿದೆ. ಜನವರಿ 16 ರಿಂದ ಹೈದರಾಬಾದ್ನ ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್, ಸೆರಂನ ಕೋವಿಶೀಲ್ಡ್ ಲಸಿಕೆಯನ್ನು ಜನತೆಗೆ ಹಾಕಲಾಗುತ್ತಿದೆ.
2 ನೇ ಬಾರಿಗೆ 22 ನಗರಗಳಿಗೆ ಕೋವ್ಯಾಕ್ಸಿನ್ಅನ್ನು ಸಾಗಣೆ ಮಾಡಲಾಗುತ್ತಿದೆ. ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ವೇಳೆಗೆ ಸರಬರಾಜು ಮುಗಿಯುತ್ತದೆ ಎಂದು ತಿಳಿದು ಬಂದಿದೆ. 1,28,343 ಬಾಟಲ್ಗಳಲ್ಲಿ 25,66,860 ಡೋಸ್ ಲಸಿಕೆಗಳನ್ನು ಸಾಗಿಸಲಾಗುತ್ತಿದೆ. 10 ಬಾಟಲಿಗಳಲ್ಲಿ 20 ಡೋಸ್ಗಳಿರುತ್ತವೆ. ಅವುಗಳನ್ನು ಹೈದರಾಬಾದ್ನಿಂದ ಚೆನ್ನೈ, ಕರ್ನಲ್, ಕೋಲ್ಕತ್ತಾ ಮತ್ತು ಮುಂಬೈನ ಸರ್ಕಾರಿ ಮೆಡಿಕಲ್ ಸ್ಟೋರ್ಗಳ ಡಿಪೋಗಳಿಗೆ ರವಾನಿಸಲಾಗುವುದು.
ದೆಹಲಿ, ರಾಯ್‌ಪುರ, ರಾಂಚಿ, ತಿರುವನಂತಪುರಂ, ಚಂಡೀಗಡ, ಬೆಂಗಳೂರು, ಪುಣೆ, ಭುವನೇಶ್ವರ ಮತ್ತು ಹೈದರಾಬಾದ್‌ಗೆ ವ್ಯಾಕ್ಸಿನ್ಗಳನ್ನು ಸಾಗಿಸಲಾಗುತ್ತಿದೆ. ಎಲ್ಲ ನಗರಗಳಿಗೆ ಹೋಲಿಸಿದರೆ ಚೆನ್ನೈಗೆ ಅತಿ ಹೆಚ್ಚು ವ್ಯಾಕ್ಸಿನ್ (2,33,080 ಡೋಸ್) ರವಾನಿಸಲಾಗುತ್ತಿದೆ. 1,56,820 ಡೋಸ್ಗಳನ್ನು ಹೈದರಾಬಾದ್‌ಗೆ, 1,52,000 ಜೈಪುರಕ್ಕೆ ಮತ್ತು ದೆಹಲಿ, ಪುಣೆ, ಭೋಪಾಲ್, ಗಾಂಧಿನಗರಗಳಿಗೆ ತಲಾ 1,50,400 ಡೋಸ್ಗಳನ್ನು ಕಳುಹಿಸಲಾಗುತ್ತಿದೆ.
ಜನವರಿ 13 ರಂದು ಆಂಧ್ರಪ್ರದೇಶ, ಗುವಾಹಟಿ, ಪಾಟ್ನಾ, ದೆಹಲಿ, ಕುರುಕ್ಷೇತ್ರ, ಬೆಂಗಳೂರು, ಪುಣೆ, ಭುವನೇಶ್ವರ, ಜೈಪುರ, ಚೆನ್ನೈಗಳಿಗೆ, ಲಕ್ನೋ ತಲಾ 2.4 ಲಕ್ಷ ಕೋವ್ಯಾಕ್ಸಿನ್ಗಳನ್ನು ಕಳುಹಿಸಲಾಗಿತ್ತು.
ಲಸಿಕೆ ಬಗೆಗಿನ ಆತಂಕಗಳನ್ನು ದೂರ ಮಾಡಲು ಮೊದಲಿಗೆ ಆರೋಗ್ಯ ಕಾರ್ಯಕರ್ತರಿಗೆ ವಿತರಿಸಲಾಗುತ್ತಿದೆ. ಕೋವ್ಯಾಕ್ಸಿನ್ ನಮ್ಮ ಸ್ಥಳೀಯ ಕೋವಿಡ್ ಲಸಿಕೆಯಾಗಿದ್ದು, ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.