ಅಹಮದಾಬಾದ್: 7ನೇ ಆವೃತ್ತಿ ಪ್ರೊ ಕಬಡ್ಡಿಯ ಮೊದಲ ಎಲಿಮಿನೇಟರ್ ಹೋರಾಟದಲ್ಲಿ ಬೆಂಗಳೂರು ಬುಲ್ಸ್ ಗೆಲುವು ದಾಖಲು ಮಾಡಿದೆ. ಬಲಿಷ್ಠ ಯುಪಿ ಯೋಧಾ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಸೆಮಿಫೈನಲ್ಗೆ ಲಗ್ಗೆ ಹಾಕಿದೆ.
ಅಹಮದಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ರೋಚಕ ಹೋರಾಟ ಕಂಡು ಬಂದಿತು. ಆರಂಭದಲ್ಲಿ ಬೆಂಗಳೂರು ಬುಲ್ಸ್ ಮೇಲೆ ಸವಾರಿ ಮಾಡಿದ ಯೋಧಾ ತಂಡ ಸುಲಭವಾಗಿ ಗೆಲುವು ಕಾಣುವ ವಿಶ್ವಾಸದಲ್ಲಿತ್ತು. ಆದರೆ ಕ್ಯಾಪ್ಟನ್ ಪವನ್ ಶೆರಾವತ್ ಆಟಕ್ಕೆ ಬೆಚ್ಚಿಬಿದ್ದ ಎದುರಾಳಿ ತಂಡ ಕೊನೆ ಕ್ಷಣದಲ್ಲಿ ಸೋತು ಶರಣಾಯಿತು.
ಆಟದ ಒಂದು ಹಂತದಲ್ಲಿ ಯೋಧಾ 34 ಅಂಕ ಹಾಗೂ ಬುಲ್ಸ್ 27 ಅಂಕಗಳಿಕೆ ಮಾಡಿದ್ದರಿಂದ ಹಾಲಿ ಚಾಂಪಿಯನ್ ಬೆಂಗಳೂರು ಸೋಲಿನತ್ತ ಮುಖ ಮಾಡಿತ್ತು. ಆದರೆ ಈ ವೇಳೆ ಪವನ್ ಸೂಪರ್ ರೈಡ್ ಮಾಡುವ ಮೂಲಕ ಎದುರಾಳಿ ತಂಡವನ್ನ ಆಲೌಟ್ ಮಾಡಿ ಪಾಯಿಂಟ್ 35-36 ಆಗುವಂತೆ ಮಾಡಿದರು. ಇದರ ಬೆನ್ನಲ್ಲೇ ಯೋಧಾ ತಂಡ ಕೂಡ 1 ಅಂಕ ಗಳಿಕೆ ಮಾಡಿದ್ದರಿಂದ ಪಂದ್ಯ ಡ್ರಾಗೊಂಡಿತ್ತು.
ಉಭಯ ತಂಡಗಳು ತಮಗೆ ನೀಡಿದ್ದ ಸಮಯದಲ್ಲಿ 36-36 ಅಂಕಗಳಿಂದ ಡ್ರಾ ಸಾಧಿಸಿದ್ದಕ್ಕಾಗಿ 6ನಿಮಿಷಗಳ ಕಾಲ ಹೆಚ್ಚಿನ ಕಾಲಾವಕಾಶ ನೀಡಲಾಗಿತ್ತು. ಈ ವೇಳೆ ಬುಲ್ಸ್ ಆರಂಭದಲ್ಲಿ 39-38 ಅಂಕಗಳಿಂದ ಹಿನ್ನಡೆ ಅನುಭವಿಸಿತ್ತು. ಇದಾದ ಬಳಿಕ ಪವನ್ ನಡೆಸಿದ ರೈಡ್ನಲ್ಲಿ ಎದುರಾಳಿ ತಂಡದ ಮೂವರನ್ನ ಔಟ್ ಮಾಡಿದ್ದರಿಂದ ರೋಚಕ ಗೆಲುವು ದಾಖಲು ಮಾಡುವಂತೆ ಆಯಿತು. ಕೊನೆಯದಾಗಿ ತಂಡ 45-48 ಅಂಕಗಳಿಂದ ಗೆಲುವು ಸಾಧಿಸಿ ಸೆಮಿಫೈನಲ್ಗೆ ಲಗ್ಗೆ ಹಾಕಿದೆ. ಬುಲ್ಸ್ ತಂಡದ ಕ್ಯಾಪ್ಟನ್ ಪವನ್ ಕುಮಾರ್ 18 ರೈಡಿಂಗ್ ಪಾಯಿಂಟ್ ಕಲೆ ಹಾಕಿದ್ರೆ, ಸುಮಿತ್ 6, ರೋಹಿತ್ 1 ಪಾಯಿಂಟ್ ಕಲೆ ಹಾಕಿದರು. ಅದೇ ಎದುರಾಳಿ ತಂಡದ ರಿಷಾಂಕ್ 6 ರೈಡಿಂಗ್ ಪಾಯಿಂಟ್ ಶ್ರೀಕಾಂತ್ 7 ಅಂಕ ಗಳಿಸಿದರು.
ಅ.16 ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಮೊದಲ ಸೆಮೀಸ್‌ನಲ್ಲಿ ಡೆಲ್ಲಿ ತಂಡದ ಎದುರು ಎಲಿಮಿನೇಟರ್ 1ರಲ್ಲಿ ಗೆದ್ದ ಬೆಂಗಳೂರು ತಂಡ ಹಾಗೂ 2ನೇ ಸೆಮೀಸ್‌ನಲ್ಲಿ ಬೆಂಗಾಲ್ ವಿರುದ್ಧ ಎಲಿಮಿನೇಟರ್ 2ರಲ್ಲಿ ಗೆದ್ದ ಯು ಮುಂಬಾ ತಂಡ ಸೆಣಸಾಟ ನಡೆಸಲಿದೆ. ಯೋಧಾ ತಂಡ ಪ್ರೊ ಕಬಡ್ಡಿ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ 45–33 ಪಾಯಿಂಟ್‌ಗಳಿಂದ ಬೆಂಗಳೂರು ಬುಲ್ಸ್ ತಂಡವನ್ನು ಸೋಲಿಸಿತ್ತು. ಆದರೆ ಇದೀಗ ಪವನ್ ಬಳಗ ಸರಿಯಾದ ಪ್ರತ್ಯುತ್ತರ ನೀಡಿದೆ.
ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ಅಬ್ಬರಕ್ಕೆ ಮಣಿದ ಹರಿಯಾಣ ಸ್ಟಿಲರ್ಸ್ 46-38 ಅಂಕಗಳಿಂದ ಸೋಲು ಕಾಣುವಂತಾಯಿತು.