ಕೋಲ್ಕತಾ: ಕಳೆದೊಂದು ವಾರದಿಂದ ಪಶ್ಚಿಮ ಬಂಗಾಳದಲ್ಲಿ ಕಿರಿಯ ವೈದ್ಯರು ನಡೆಸುತ್ತಿದ್ದ ಪ್ರತಿಭಟನೆ ಮಾತುಕತೆ ಫಲಪ್ರದವಾಗುವುದರೊಂದಿಗೆ ಅಂತ್ಯವಾಗಿದೆ.
ಪ್ರತಿಭಟನಾನಿರತರು ವೈದ್ಯರಿಗೆ ಸೂಕ್ತ ಭದ್ರತೆಯನ್ನು ಸರ್ಕಾರ ಒದಗಿಸಬೇಕು ಎಂದು ಬೇಡಿಕೆಯನ್ನಿಟ್ಟಿದ್ದರು. ಈ ಕುರಿತಂತೆ ಸಿಎಂ ಮಮತಾ ಬ್ಯಾನರ್ಜಿ ಜೊತೆಗೆ ಮಾತುಕತೆ ನಡೆಸಬೇಕು ಎಂದು ಬಿಗಿಪಟ್ಟು ಹಿಡಿದಿದ್ದರು. ವೈದ್ಯರ ಕೂಗಿಗೆ ಕೊನೆಗೂ ಗ್ರೀನ್ ಸಿಗ್ನಲ್ ನೀಡಿದ ದೀದಿ ಇಂದು ಸಂಜೆ ಕಿರಿಯ ವೈದ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಡಾಕ್ಟರ್ಗಳಿಗೆ ಸೂಕ್ತ ಭದ್ರತೆ ನೀಡುವ ಕುರಿತಂತೆ ಹತ್ತು ಅಂಶಗಳ ಸಲಹೆಯನ್ನು ಪಶ್ಚಿಮ ಬಂಗಾಳ ಸಿಎಂ ನೀಡಿದ್ದಾರೆ.
ದೇಶಾದ್ಯಂತ ವೈದ್ಯರ ಪ್ರತಿಭಟನೆ... ಮೀಟಿಂಗ್ನಲ್ಲಿ ಭದ್ರತೆಗೆ ಹತ್ತು ಅಂಶಗಳ ಸಲಹೆ ನೀಡಿದ ದೀದಿ
ಇದೀಗ ಸಭೆ ಮುಕ್ತಾಯವಾಗಿದ್ದು ವೈದ್ಯರು ವಾರಗಳಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ. ಮುಖ್ಯಮಂತ್ರಿಯವರಿಗೆ ಬೇಡಿಕೆಯನ್ನು ಕಾರ್ಯರೂಪಕ್ಕಿಳಿಸಲು ಸಮಯಾವಕಾಶ ನೀಡುತ್ತೇವೆ. ನಾವು ಮತ್ತೆ ಕೆಲಸಕ್ಕೆ ಹಾಜರಾಗಲು ತೀರ್ಮಾನಿಸಿದ್ದೇವೆ ಎಂದು ಸಭೆಯ ಬಳಿಕ ವೈದ್ಯರು ಹೇಳಿದ್ದಾರೆ.
ಕೋಲ್ಕತಾದ ಎನ್ಆರ್ಎಸ್ ಮೆಡಿಕಲ್ ಕಾಲೇಜಿನಲ್ಲಿ ಕಿರಿಯ ವೈದ್ಯನೋರ್ವನಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿತ್ತು. ಇದು ರಾಷ್ಟ್ರವ್ಯಾಪಿ ತೀವ್ರ ಖಂಡನೆಗೊಳಗಾಗಿತ್ತು. ಇದೇ ಘಟನೆಯನ್ನು ಖಂಡಿಸಿ ದೇಶಾದ್ಯಂತ ವೈದ್ಯರು ಪ್ರತಿಭಟನೆ ನಡೆಸಿದ್ದರು.