ನವದೆಹಲಿ: ಕೊರೊನಾ ಸಂಕಷ್ಟದ ಸಮಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಸಹಾಯವಾಗಿದ್ದು,ಕಳೆದ ವರ್ಷಕ್ಕಿಂತ ಜುಲೈನಲ್ಲಿ ಶೇ.114ಕ್ಕಿಂತ ಅಧಿಕ ಪ್ರಮಾಣದ ಕೆಲಸವನ್ನ ನೀಡಲಾಗಿದೆ ಎಂದು ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಮಾಹಿತಿ ನೀಡಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣಾಭಿವೃದ್ಧಿ ಸಚಿವಾಯಲವು ಗ್ರಾಮೀಣ ಭಾಗದ ಜನರಿಗೆ ಉದ್ಯೋಗಾವಕಾಶಗಳನ್ನು ನೀಡುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಮೇ ತಿಂಗಳಲ್ಲಿ ಶೇಕಡಾ 73 ರಷ್ಟು ಫಲಾನುಭವಿಗಳು ಇದರ ಲಾಭವನ್ನು ಪಡೆದಿದ್ದು, ಜೂನ್ ಮತ್ತು ಜುಲೈನಲ್ಲಿ ಇದು ಶೇಕಡಾ 92ರಷ್ಟಾಗಿದೆ ಎಂದು ಹೇಳಿದೆ.
ಕೊರೊನಾ ಮಹಾಮಾರಿಯಿಂದ ವಲಸೆ ಕಾರ್ಮಿಕರು ಸಾಕಷ್ಟು ಸಂಕಷ್ಟ ಎದುರಿಸಿದ್ದು, ಈ ವೇಳೆ ಸರ್ಕಾರ ಆಯಾ ಹಳ್ಳಿಗಳಲ್ಲಿ ಜೀವನೋಪಾಯ ಒದಗಿಸುವ ಸಲುವಾಗಿ ಈ ಯೋಜನೆಗೆ ಹೆಚ್ಚಿನ ಒತ್ತು ನೀಡಿತು. ಅಷ್ಟೆ ಅಲ್ಲದೇ ಕೇಂದ್ರ ಸರ್ಕಾರವು ಈ ಯೋಜನೆಯಡಿ ಕೂಲಿ ಕಾರ್ಮಿಕರ ವೇತನವನ್ನು 182 ರೂ.ಗಳಿಂದ 202 ರೂ.ಗೆ ಏರಿಕೆ ಮಾಡಿತ್ತು.
2020 - 21ರ ಆರ್ಥಿಕ ವರ್ಷದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ 61,500 ಕೋಟಿ ರೂ.ಗಳಿಗೆ ಮೀಸಲಿಡಲಾಗಿತ್ತು. ಆದರೆ, ಕೇಂದ್ರ ಸರ್ಕಾರದ ಆತ್ಮ ನಿರ್ಭರ ಯೋಜನೆ ಅಡಿ ಸುಮಾರು 40,000 ಕೋಟಿ ರೂ.ಗಳನ್ನು ಹೆಚ್ಚವರಿಯಾಗಿ ನೀಡಿದೆ.
ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ ಜುಲೈ 2020 ರಲ್ಲಿ ಎಂಜಿಎನ್‌ಆರ್‌ಇಜಿಎಸ್ ದೇಶದಲ್ಲಿ ಸರಾಸರಿ 2.26 ಕೋಟಿ ಜನರು ಕೆಲಸ ಪಡೆದಿದ್ದು, ಇದು ಹಿಂದಿನ ವರ್ಷಕ್ಕಿಂತ ಶೇಕಡಾ 114 ರಷ್ಟು ಹೆಚ್ಚು ಎಂದು ಕೇಂದ್ರ ಸರ್ಕಾರದ ಅಂಕಿ- ಅಂಶಗಳು ಹೇಳುತ್ತಿವೆ. ಅದೇ ತಿಂಗಳಲ್ಲಿ ಸರಾಸರಿ 1.05 ಕೋಟಿ ಜನರಿಗೆ ದೈನಂದಿನ ಕೆಲಸ ಸಿಕ್ಕಿದೆ ಎಂದೂ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ಹೇಳಿದೆ.
ಜೂನ್‌ನಲ್ಲಿ ಸರಾಸರಿ 3.35 ಕೋಟಿ ಜನರಿಗೆ ದೈನಂದಿನ ಕೆಲಸ ದೊರೆತಿದೆ. ಇದು ಕಳೆದ ವರ್ಷ ಜೂನ್‌ನಲ್ಲಿ ದಾಖಲಾದ 1.74 ಕೋಟಿಗಿಂತ ಶೇಕಡಾ 92 ರಷ್ಟು ಹೆಚ್ಚು ಎಂದು ಹೇಳಬಹುದು.
ಜುಲೈ 30 ರವರೆಗೆ ಸುಮಾರು1.86 ಲಕ್ಷ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರು ಉದ್ಯೋಗಾವಕಾಶವನ್ನು ಪಡೆದಿದ್ದಾರೆ ಎಂದು ಆರ್‌ಎಂಡಿ ಅಂಕಿ -ಅಂಶಗಳು ಹೇಳುತ್ತಿವೆ.
ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಂಕಿ- ಅಂಶಗಳ ಪ್ರಕಾರ, ಜುಲೈ 30 ರವರೆಗೆ 9.24 ಕೋಟಿ ಫಲಾನುಭವಿಗಳಿಗೆ ಉದ್ಯೋಗ ದೊರೆತಿದೆ. ಜುಲೈ 29 ರವರೆಗೆ ಈ ಯೋಜನೆಯಡಿ 50,780 ಕೋಟಿ ರೂಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಇಲಾಖೆ ಘೋಷಿಸಿದೆ.