ಕೋಲ್ಕತ್ತಾ: ಮುದ್ರಣ ಮಾಧ್ಯಮದಲ್ಲಿ ಪ್ರಕಟವಾಗುವ ಸುದ್ದಿಗಳು ಓದುಗರ ಮೇಲೆ ತುಂಬ ಪರಿಣಾಮ ಬೀರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಂಚಿಕೊಳ್ಳುವ ಮುನ್ನ ಜನರು ಅವುಗಳ ಸತ್ಯಾಸತ್ಯತೆ ಕಂಡುಕೊಳ್ಳಬೇಕು ಎಂದು ಮಾಜಿ ರಾಷ್ಟ್ರಪ್ರತಿ ಪ್ರಣಬ್ ಮುಖರ್ಜಿ ಹೇಳಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಪ್ರಣಾಬ್ ದಾದಾ, ಜನರು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಗಳನ್ನು ಶೇರ್ ಮಾಡುವ ಮೊದಲು ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ಹಲವರು ಸಾಮಾಜಿಕ ಮತ್ತು ಕೋಮು ಉದ್ವಿಗ್ನತೆಗಳನ್ನು ಸೃಷ್ಟಿಸುವ ವದಂತಿಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಮುಗ್ಧ ಜನರು ಸಹಜವಾಗಿ ಅಂತಹ ಪೋಸ್ಟ್ಗಳನ್ನು ಹಂಚಿಕೊಂಡು ಕಿಡಿಗೇಡಿತನದ ಪಾಲುದಾರರಾಗಿದ್ದಾರೆ ಎಂದರು.
ಮುದ್ರಣ ಮಾಧ್ಯಮದಲ್ಲಿ ತಮಗೆ ಅಪಾರ ವಿಶ್ವಾಸವಿದೆ ಎಂದು ಪ್ರತಿಪಾದಿಸಿದ ಭಾರತ ರತ್ನ ಪುರಸ್ಕೃತ ಮುಖರ್ಜಿ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸಂಗತಿಗಳನ್ನು ಬಿತ್ತರಿಸುವ ಮುನ್ನ ಆ ವರದಿಯನ್ನು ಮತ್ತೊಮ್ಮೆ ಸಂಪಾದಿಸಿ ಮತ್ತು ಪರಿಶೀಲಿಸಿ ಪ್ರಕಟಿಸುತ್ತಾರೆ ಎಂಬ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.