ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ಆರಂಭವಾಗಿದ್ದು, 672 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಮತದಾನದಲ್ಲಿ 1.47 ಕೋಟಿಗೂ ಹೆಚ್ಚು ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುತ್ತಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ 70 ಕ್ಷೇತ್ರಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಇನ್ನು ಪೌರತ್ವ ಕಿಚ್ಚಿಗೆ ಪ್ರಮುಖ ಪಾತ್ರ ವಹಿಸಿದ್ದ ಶಾಹೀನ್ ಬಾಗ್, ಜಾಮಿಯಾ ನಗರ ಮತ್ತು ಸೀಲಾಂಪುರಿನಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಮತ್ತು ಅರೆಸೈನಿಕ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಚುನಾವಣೆಯಲ್ಲಿ 81 ಲಕ್ಷ ಪುರುಷ ಮತದಾರರು, 66.80 ಲಕ್ಷ ಮಹಿಳಾ ಮತದಾರರು ಮತ್ತು 869 ತೃತೀಯ ಲಿಂಗ ಮತದಾರರು ವೋಟಿಂಗ್ ಪವರ್ ಪಡೆದುಕೊಂಡಿದ್ದಾರೆ. ಸುಮಾರು 2.33 ಲಕ್ಷ ಮತದಾರರು 18-19 ವರ್ಷದೊಳಗಿನವರಾಗಿದ್ದು, 2.04 ಲಕ್ಷ ಮತದಾರರು 80 ವರ್ಷದ ಹಿರಿಯ ನಾಗರಿಕರಾಗಿದ್ದರೆ. 11,608 ಸೇವಾ ಮತದಾರರಿದ್ದಾರೆ ಚುನಾವಣಾ ಇಲಾಖೆ ಮಾಹಿತಿ ನೀಡಿದೆ.
2015 ರ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಶೇ 54.3 ರಷ್ಟು ಮತಗಳನ್ನು ಪಡೆದಿದ್ದರೆ, ಬಿಜೆಪಿ ಶೇಕಡಾ 32 ಮತ್ತು ಕಾಂಗ್ರೆಸ್ ಕೇವಲ ಶೇ 9.6 ರಷ್ಟು ಮತಗಳನ್ನು ಗಳಿಸಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಏಳು ಸ್ಥಾನಗಳನ್ನು ತನ್ನ ತೆಕ್ಕೆಗೆ ಪಡೆದಿದ್ದ ಬಿಜೆಪಿ, ಆಪ್ ಪಾರ್ಟಿಯನ್ನು ಮಣಿಸುವ ಪ್ರಯತ್ನದಲ್ಲಿದೆ. ಇನ್ನು ಮಂಗಳವಾರ ಮತ ಎಣಿಕೆ ನಡೆಯಲಿದ್ದು, ಅಂದು ಯಾರಿಗೆ ದೆಹಲಿ ಗದ್ದುಗೆ ಎಂಬುದು ಬಹಿರಂಗವಾಗಲಿದೆ.