ಇಂದು ಉತ್ತರಪ್ರದೇಶದ ವೃಂದಾವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿರುವ ಕಾರ್ಯಕ್ರಮವೊಂದರಲ್ಲಿ ಬಾಹುಬಲಿ ಚಿತ್ರತಂಡ ಕೂಡಾ ಭಾಗವಹಿಸುತ್ತಿದೆ. ಅಕ್ಷಯಪಾತ್ರೆ ಫೌಂಡೇಶನ್ ವತಿಯಿಂದ ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಆಹಾರ ನೀಡಲಾಗುತ್ತದೆ.
ಅಕ್ಷಯಪಾತ್ರೆ ಫೌಂಡೇಶನ್ಗೆ ಬಾಹುಬಲಿ ನಿರ್ದೇಶಕ ಎಸ್.ಎಸ್. ರಾಜಮೌಳಿ ಪ್ರಚಾರಕರಾಗಿದ್ದಾರೆ. ಆದರೆ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ ಚಿತ್ರದ ಕೆಲವು ನಟರು, ತ್ರಂತ್ರಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎನ್ನಲಾಗಿದೆ. ಚಿತ್ರತಂಡದೊಂದಿಗೆ ಖ್ಯಾತ ಶೆಫ್ ಸಂಜೀವ್ಕಪೂರ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಮಥುರ ಸಂಸದೆ , ಚಿತ್ರನಟಿ ಹೇಮಮಾಲಿನಿ ಹಾಗೂ ಇನ್ನಿತರ ಗಣ್ಯರು ಭಾಗವಹಿಸುತ್ತಿದ್ದಾರೆ.


ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ 20 ಮಂದಿ ಬಡಮಕ್ಕಳಿಗೆ ತಾವೇ ಆಹಾರ ಬಡಿಸುತ್ತಿದ್ದಾರೆ. ಇದರೊಂದಿಗೆ ಇದುವರೆಗೂ 300 ಕೋಟಿ ಬಡಜನರಿಗೆ ಉಚಿತ ಆಹಾರ ಬಡಿಸಿದ ಕೀರ್ತಿಗೆ ಅಕ್ಷಯ ಫೌಂಡೇಶನ್ ಪಾತ್ರವಾಗಲಿದೆ. ಈ ದಾಖಲೆ ನೆನಪಿಗೆ ವೃಂದಾವನದ ಚಂದ್ರೋದಯ ಮಂದಿರದಲ್ಲಿ ಪ್ರಧಾನಿ ಮೋದಿ ಶಿಲಾಫಲಕವನ್ನು ಉದ್ಘಾಟಿಸುತ್ತಿದ್ದಾರೆ.
ಎಸ್.ಎಸ್. ರಾಜಮೌಳಿ ನಮಗೆ ಅತ್ಯಂತ ಆಪ್ತರು. ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಬಾಹುಬಲಿ ಚಿತ್ರತಂಡದ ಕೆಲವರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಇದು ನಮಗೆ ಸಂತೋಷದ ವಿಷಯ ಎಂದು ಇಸ್ಕಾನ್ ಪ್ರಧಾನ ಕಾರ್ಯದರ್ಶಿ ನವೀನ್ ನೀರದಾ ದಾಸ್ ಹೇಳಿದ್ದಾರೆ.