ಅಯೋಧ್ಯೆ: ಅಯೋಧ್ಯೆಯಲ್ಲಿ ಮುಂದಿನ ದಿನಗಳಲ್ಲಿ ನಿರ್ಮಾಣವಾಗಲಿರುವ ಮಸೀದಿಯು ವಕ್ಫ್ ಕಾಯ್ದೆಗೆ ವಿರುದ್ಧವಾಗಿದ್ದು, ಶರಿಯತ್‌ನಡಿಯಲ್ಲಿ ಇದು ಕಾನೂನು ಬಾಹಿರವಾಗಿದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ಸದಸ್ಯ ಜಫರ್ಯಾಬ್ ಜಿಲಾನಿ ಹೇಳಿದ್ದಾರೆ.
ಕಳೆದ ವರ್ಷ ನ.9 ರಂದು ಅಯೋಧ್ಯೆ ವಿವಾದ ಕುರಿತಂತೆ ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಮತ್ತು ಮಸೀದಿ ನಿರ್ಮಾಣಕ್ಕೆ ಅಯೋಧ್ಯೆಯಲ್ಲಿಯೇ 5 ಎಕರೆ ಜಾಗವನ್ನು ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತ್ತು. ಬಳಿಕ ಸರ್ಕಾರ ಸುಪ್ರೀಂಕೋರ್ಟ್ ತೀರ್ಪಿನಂತೆ ಇಲ್ಲಿನ ದನ್ನಿಪುರದಲ್ಲಿ 5 ಎಕರೆ ಜಾಗವನ್ನು ಮಸೀದಿ ನಿರ್ಮಾಣಕ್ಕೆ ನೀಡಿತ್ತು. ಈ ಹಿನ್ನೆಲೆ ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲಾಗುತ್ತಿದೆ.
ಕಳೆದ ವಾರ ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಕಚೇರಿಯಲ್ಲಿ ಮಸೀದಿ ಮತ್ತು ಐದು ಎಕರೆ ಪ್ರದೇಶದಲ್ಲಿ ನಿರ್ಮಿಸಲಿರುವ ಆಸ್ಪತ್ರೆಯ ನೀಲನಕ್ಷೆಯನ್ನು ಅನಾವರಣಗೊಳಿಸಲಾಯಿತು. ಮಸೀದಿ ನಿರ್ಮಾಣದ ಶಂಕುಸ್ಥಾಪನೆಯು ಜನವರಿ 26ರ ಗಣರಾಜ್ಯೋತ್ಸವ ದಿನದಂದು ನೆರವೇರಲಿದೆ ಎಂದು ಮಸೀದಿ ನಿರ್ಮಾಣದ ಟ್ರಸ್ಟ್ ತಿಳಿಸಿದೆ.
ಜಿಲಾನಿ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾಬರಿ ಮಸೀದಿ ಕ್ರಿಯಾ ಸಮಿತಿ (ಐಐಸಿಎಫ್) ಕಾರ್ಯದರ್ಶಿ ಅಥರ್ ಹುಸೇನ್, ಪ್ರತಿಯೊಬ್ಬರು ಶರಿಯತ್ ಅನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ಸುಪ್ರೀಂಕೋರ್ಟ್ ಭೂಮಿಯನ್ನು ಮಂಜೂರು ಮಾಡಿದಾಗ ಅದು ಕಾನೂನುಬಾಹಿರವಲ್ಲ ಎಂದು ಹೇಳಿದರು. ವಕ್ಫ್ ಕಾಯ್ದೆಯ ಪ್ರಕಾರ ಮಸೀದಿಗಳು ಅಥವಾ ಮಸೀದಿಯ ಜಾಗವನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.