ಮುಂಬೈ: ವಾಣಿಜ್ಯ ನಗರಿಯ ಆಟೋ ಚಾಲಕನೋರ್ವ ತನ್ನ ಆಟೋ ರಿಕ್ಷಾವನ್ನು ಮನೆಯಂತೆ ಮಾರ್ಪಾಡು ಮಾಡಿದ್ದಾರೆ. ಅವರ ಆಟೋ ಈಗ ಮುಂಬೈನಲ್ಲಿ ಫೇಮಸ್ ಆಗಿದೆ.
ಇವರ ಹೆಸರು ಸತ್ಯವಾನ್ ಗೀತಿ. ಮುಂಬೈ ಮಹಾನಗರಿಯ ಓರ್ವ ಸಾಮಾನ್ಯ ಆಟೋ ಚಾಲಕ. ಆದ್ರೆ ಇವರ ಸಾರಥಿ ಸಾಮಾನ್ಯವಲ್ಲ. ಅದು ಇತರ ಎಲ್ಲರ ಆಟೋಗಳಿಗಿಂತ ಭಿನ್ನವಾಗಿದೆ. ಯಾಕಂದ್ರೆ ಇವರ ಆಟೋದಲ್ಲಿ ಮನೆಯಲ್ಲಿ ಲಭ್ಯವಿರುವ ಕೆಲ ಸಾಮಾನ್ಯ ಸೌಲಭ್ಯಗಳಿವೆ. ಕೈ ತೊಳೆಯುವ ಬೇಸಿನ್, ನೀರು, ಮೊಬೈಲ್ ಫೋನ್ ಚಾರ್ಜಿಂಗ್, ಟಿಶ್ಯೂ ಪೇಪರ್, ಹೂವಿನ ಕುಂಡಗಳನ್ನು ಇಟ್ಟು ಅಲಂಕರಿಸಲಾಗಿದೆ.
ತಮ್ಮ ಆಟೋದಲ್ಲಿ ಬರುವ ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣಿಸಬೇಕೆಂಬ ಉದ್ದೇಶದಿಂದ ಇವರು ಈ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರಂತೆ. ಈ ಆಟೋ, ಮನೆ ಸೌಲಭ್ಯಗಳನ್ನು ಒಳಗೊಂಡಿರುವ ಮುಂಬೈನ ಮೊದಲ ಆಟೋ ರಿಕ್ಷಾ ಎಂದು ತಮ್ಮ ಆಟೋದಲ್ಲಿ ಗೀತಿ ಬರೆದುಕೊಂಡಿದ್ದಾರೆ.
ಆಟೋದಲ್ಲಿ ಸಣ್ಣ ನೀರಿನ ಟ್ಯಾಂಕ್ ಇದ್ದು, ಅದರ ಮೂಲಕ ಕೈ ತೊಳೆಯುವ ನೀರು ಬೇಸಿನ್ಗೆ ಬರುತ್ತೆ. ಅಲ್ಲಿ ಕೈ ತೊಳೆದು ವ್ಯರ್ಥವಾಗುವ ನೀರನ್ನು ಹೂದಾನಿಗೆ ಬಿಟ್ಟು ಅನಾವಶ್ಯಕವಾಗಿ ಪೋಲಾಗುವ ನೀರನ್ನು ಸದುಪಯೋಗ ಮಾಡುತ್ತಿದ್ದಾರೆ. ಇದರೊಂದಿಗೆ ಆಟೋದಲ್ಲೇ ಹಸಿರ ಸಿರಿಗೂ ಅವಕಾಶ ನೀಡಿದ್ದಾರೆ. ಪ್ರತಿನಿತ್ಯ ತಮ್ಮ ಆಟೋವನ್ನು ಸ್ವಚ್ಛಗೊಳಿಸಿ ಪ್ರಯಾಣಿಕರ ಸುಖ ಪಯಣಕ್ಕೆ ಗೀತಿ ಆದ್ಯತೆ ನೀಡಿದ್ದಾರೆ.