ಅಸ್ಸೋಂ: ಅಸ್ಸೋಂನ ರಾಷ್ಟ್ರೀಯ ಪೌರ ನೋಂದಣಿ(ಎನ್‌ಆರ್‌ಸಿ)ಯ ಮೊದಲ ಲಿಸ್ಟ್ ಶನಿವಾರ ಬೆಳಗ್ಗೆ 10ಗಂಟೆಗೆ ಹೊರಬೀಳಲಿದ್ದು, ಲಭ್ಯವಾಗಿರುವ ಮಾಹಿತಿ ಪ್ರಕಾರ ಬರೋಬ್ಬರಿ 41 ಲಕ್ಷ ಒಳನುಸುಳುಕೋರರು ಭಾರತದಿಂದ ಹೊರಬೀಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಭಾರೀ ವಿವಾದ ಮತ್ತು ಚರ್ಚೆಗೆ ಕಾರಣವಾಗಿದ್ದ ದೇಶದ ಈಶಾನ್ಯ ರಾಜ್ಯ ಅಸ್ಸೋಂನ ರಾಷ್ಟ್ರೀಯ ಪೌರ ನೋಂದಣಿ (ನ್ಯಾಷನಲ್ ರಿಜಿಸ್ಟ್ರಾರ್ ಆಫ್ ಸಿಟಿಜನ್-ಎನ್‌ಆರ್‌ಸಿ) ಅಂತಿಮ ಪಟ್ಟಿ ರಿಲೀಸ್ ಆಗುವುದರಿಂದ ಹಿಂಸಾತ್ಮಕ ಕೃತ್ಯಗಳು ನಡೆಯುವ ಸಾಧ್ಯತೆ ಇದೆ. ಹೀಗಾಗಿ ಎಲ್ಲ ರೀತಿಯಲ್ಲೂ ಭದ್ರತೆ ಒದಗಿಸಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಯೋಧರನ್ನು ನಿಯೋಜನೆ ಮಾಡಲಾಗಿದೆ.
ಶನಿವಾರ ಬೆಳಗ್ಗೆ 10ಗಂಟೆಗೆ ಆನ್ಲೈನ್ನಲ್ಲಿ ಮೊದಲ ಪಟ್ಟಿ ಪ್ರಕಟಗೊಳ್ಳುವುದರಿಂದ ಭಾರತದೊಳಗೆ ನುಸುಳಿ ಇಲ್ಲೇ ವಾಸ ಮಾಡುತ್ತಿರುವ ಕೆಲವರು ಹೊರಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.
1985ರಲ್ಲಿ ಏರ್ಪಟ್ಟಿರುವ ಅಸ್ಸೋಂ ಒಪ್ಪಂದ ಪ್ರಕಾರ, 1971 ಮಾರ್ಚ್ 25ರ ಬಳಿಕ ಅಸ್ಸೋಂನೊಳಗೆ ಯಾರು ಪ್ರವೇಶ ಪಡೆದಿದ್ದಾರೋ ಅವರೆಲ್ಲರನ್ನು ಅಕ್ರಮ ವಲಸಿಗರೆಂದು ಗುರುತಿಸಿ, ಅವರನ್ನು ಗಡಿಪಾರು ಮಾಡಲಾಗುವುದು. ಕಳೆದ ವರ್ಷ ಜುಲೈ 30ಕ್ಕೆ ರಾಷ್ಟ್ರೀಯ ಪೌರತ್ವ ನೋಂದಣಿ ಅಂತಿಮ ಕರಡು ಪ್ರಕಟಿಸಲಾಗಿತ್ತು. ಅದರ ಪ್ರಕಾರ, ಅರ್ಜಿ ಹಾಕಿಕೊಂಡಿದ್ದ 3.29 ಕೋಟಿ ಜನರ ಪೈಕಿ 40 ಲಕ್ಷಕ್ಕೂ ಹೆಚ್ಚು ಜನರು ವಲಸಿಗರು ಎಂದು ಗುರುತಿಸಲಾಗಿತ್ತು. ಕಳೆದ ಜೂನ್ 26ರಂದು ಹೆಚ್ಚುವರಿ ಕರಡು ಪ್ರಕಟಿಸಲಾಗಿದ್ದು, 1.02 ಲಕ್ಷ ಜನರು ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದಿದ್ದಾರೆ.