ಗುವಾಹಟಿ(ಅಸ್ಸೋಂ): 'ಬೇಟಿ ಬಚಾವೋ ಬೇಟಿ ಪಡಾವೋ' ಯೋಜನೆಗೆ ದೊಡ್ಡ ಉತ್ತೇಜನ ನೀಡಲು ಅಸ್ಸೋಂ ಸರ್ಕಾರ ಶನಿವಾರ 12ನೇ ತರಗತಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಬಾಲಕಿಯರಿಗೆ ಸ್ಕೂಟಿ ವಿತರಿಸಿದೆ.
ಅಸ್ಸೋಂ ಸರ್ಕಾರವು ಒಂಬತ್ತು ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಯರಿಗೆ 5,452 ಸ್ಕೂಟಿಗಳನ್ನು ವಿತರಿಸಿದೆ. ಇದರಲ್ಲಿ ಬಕ್ಸಾದಲ್ಲಿ 500, ಕಾರ್ಬಿ ಆಂಗ್ಲಾಂಗ್‌ನಲ್ಲಿ 282, ಬಾರ್‌ಪೇಟಾದಲ್ಲಿ 1430, ಬಿಸ್ವಾನಾಥ್‌ನಲ್ಲಿ 548, ಬೊಂಗೈಗಾಂವ್‌ನಲ್ಲಿ 203, ಗೋಲಘಾಟ್‌ನಲ್ಲಿ 743, ಹೈಲಕಂಡಿಯಲ್ಲಿ 5, ಜೋರ್ಹತ್‌ನಲ್ಲಿ 1,324 ಮತ್ತು ಸೋನಿತ್ಪುರ ಜಿಲ್ಲೆಯಲ್ಲಿ 600 ಸ್ಕೂಟಿ ವಿತರಿಸಿದೆ.
'ಡಾ.ಬನಿಕಾಂತಾ ಕಾಕೋಟಿ ಪ್ರಶಸ್ತಿ' ಯೋಜನೆಯಡಿ 2020ರಿಂದ ಪ್ರಾರಂಭವಾಗುವ ಹೈಯರ್ ಸೆಕೆಂಡರಿ (ಎಚ್‌ಎಸ್) ಪರೀಕ್ಷೆಯಲ್ಲಿ ಪ್ರಥಮ ವಿಭಾಗವನ್ನು ಪಡೆದ ಪ್ರತಿ ವಿದ್ಯಾರ್ಥಿನಿಗೆ ಸ್ಕೂಟಿ ವಿತರಿಸುವುದಾಗಿ ಅಸ್ಸೋಂ ಸರ್ಕಾರ ಈ ಹಿಂದೆ ಘೋಷಿಸಿತ್ತು.
ಅಸ್ಸೋಂ ಹೈಯರ್ ಸೆಕೆಂಡರಿ ಎಜುಕೇಶನ್ ಕೌನ್ಸಿಲ್ ಅಡಿಯಲ್ಲಿ 12ನೇ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ಸುಮಾರು 22,000 ಸ್ಕೂಟಿಗಳನ್ನು ವಿತರಿಸಲಾಗುವುದು. ಇದಕ್ಕಾಗಿ ರಾಜ್ಯ ಬೊಕ್ಕಸದಿಂದ 33 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ರಾಜ್ಯ ಶಿಕ್ಷಣ ಸಚಿವ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ವಿವಿಧ ಸರ್ಕಾರಿ ಯೋಜನೆಗಳ ಬಗ್ಗೆ ವಿವರಿಸಿದ ಶರ್ಮಾ, ಜಿಡಿಪಿಯ ಶೇ.6ರಷ್ಟು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಖರ್ಚು ಮಾಡಿದ ದೇಶದ ಆಯ್ದ ರಾಜ್ಯಗಳಲ್ಲಿ ಅಸ್ಸೋಂ ಕೂಡ ಒಂದು ಎಂದು ಹೇಳಿದ್ದಾರೆ.
ಅಸ್ಸೋಂ ಕ್ಲಾಸ್ 12ರ ಫಲಿತಾಂಶವನ್ನು 2020ರ ಜೂನ್ 25ರಂದು ಘೋಷಿಸಲಾಗಿತ್ತು. ಒಟ್ಟು 1,68,367 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಶೇ.78.28ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.