ಗುವಾಹಟಿ : ಅಸ್ಸೋಂನಲ್ಲಿ ಪ್ರವಾಹ ಪರಿಸ್ಥಿಯಿಂದಾಗಿ ಮಂಗಳವಾರ 9 ಜನ ಮೃತಪಟ್ಟಿದ್ದು, ರಾಜ್ಯದ 28 ಜಿಲ್ಲೆಗಳಲ್ಲಿ 33 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸರ್ಕಾರದ ಅಧಿಕೃತ ಬುಲೆಟಿನ್ ತಿಳಿಸಿದೆ.
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ)ದ ದೈನಂದಿನ ಪ್ರವಾಹ ಬುಲೆಟಿನ್ ಪ್ರಕಾರ, ದಿಬ್ರುಗರ್ ಜಿಲ್ಲೆಯಲ್ಲಿ ಮೂವರು, ಟಿನ್ಸುಕಿಯಾ ಮತ್ತು ಬಾರ್ಪೆಟಾದಲ್ಲಿ ತಲಾ ಇಬ್ಬರು, ಬಿಸ್ವಾನಾಥ್ ಮತ್ತು ಗೋಲಘಾಟ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಇದುವರೆಗೆ ಒಟ್ಟು 85 ಜನರು ಪ್ರವಾಹ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟಿದ್ದಾರೆ.
ಭಾರಿ ಮಳೆಗೆ ಬ್ರಹ್ಮಪುತ್ರ ಮತ್ತು ಅದರ ಉಪನದಿಗಳ ತುಂಬಿ ಹರಿಯುತ್ತಿದ್ದು, ಕಾಜಿರಂಗ ರಾಷ್ಟ್ರೀಯ ಉದ್ಯಾನಕ್ಕೆ ನೀರು ನುಗ್ಗಿ ಹುಲಿ ಸೇರಿದಂತೆ ಇತರ ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಿವೆ. ಪ್ರಾಣಿಗಳು ಜೀವ ರಕ್ಷಣೆಗಾಗಿ ಜನವಸತಿ ಪ್ರದೇಶಗಳಿಗೆ ಲಗ್ಗೆಯಿಟ್ಟಿದ್ದು, ರಾಯಲ್ ಬಂಗಾಳದ ಹುಲಿಯೊಂದು ಸೋಮವಾರ ಅಗೋರಟೋಲಿ ಅರಣ್ಯ ವ್ಯಾಪ್ತಿಯ ಕಂಡೋಲಿಮರಿ ಗ್ರಾಮದ ಮೇಕೆ ಶೆಡ್‌ಗೆ ಆಗಮಿಸಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಹೆಚ್ಚು ಹಾನಿಗೊಳಗಾದ ಜಿಲ್ಲೆಗಳ ಪೈಕಿ ಬಾರ್ಪೆಟಾದಲ್ಲಿ 5.50 ಲಕ್ಷ ಹಾಗೂ ಧುಬ್ರಿ, ಮೊರಿಗಾಂವ್ ಮತ್ತು ದಕ್ಷಿಣ ಸಲ್ಮರಾ ಜಿಲ್ಲೆಗಳಲ್ಲಿ ಕ್ರಮವಾಗಿ 4.11 ಲಕ್ಷ, 4.08 ಲಕ್ಷ, ಮತ್ತು 2.25 ಲಕ್ಷ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇನ್ನೊಂದು ಹುಲಿ ಕಾರ್ಬಿ ಆಂಗ್ಲಾಂಗ್ ಜಿಲ್ಲೆಯ ಸುರಕ್ಷಿತ ಪ್ರದೇಶಕ್ಕೆ ತಲುಪಿದರೆ, ಮತ್ತೊಂದು ಹುಲಿ ರಾಷ್ಟ್ರೀಯ ಹೆದ್ದಾರಿ 37 ರ ಸಮೀಪ ಇದೆ ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ. ಕಾಜಿರಂಗ ರಾಷ್ಟ್ರೀಯ ಉದ್ಯಾನದ ಅಗರ್ತೋಲಿ ಶ್ರೇಣಿಯ ಸುಕಾನಿ ಶಿಬಿರದ ಬಳಿ ಒಂದು ವರ್ಷದ ಖಡ್ಗಮೃಗವನ್ನು ರಕ್ಷಿಸಲಾಗಿದೆ. ಇದುವರೆಗೆ 102 ಪ್ರಾಣಿಗಳನ್ನು ರಕ್ಷಿಸಲಾಗಿದ್ದು, ಕಾಜಿರಂಗದಲ್ಲಿ ಪ್ರವಾಹ ಸಂಬಂಧಿತ ಘಟನೆಗಳಲ್ಲಿ 51 ಪ್ರಾಣಿಗಳು ಮೃತಪಟ್ಟಿವೆ. ಒಟ್ಟು 1.28 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಪ್ರವಾಹದಲ್ಲಿ ಮುಳುಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಅಸ್ಸೋಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್, ಧೆಮಾಜಿ ಜಿಲ್ಲೆಯ ಜೊನೈ, ಲಖಿಂಪುರ ಮತ್ತು ತವರು ಕ್ಷೇತ್ರ ಮಜುಲಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು.