ಅಸ್ಸೋಂ: ಭಾರೀ ಪ್ರವಾಹದ ಕಾರಣದಿಂದಾಗಿ ಈಗಾಗಲೇ ಶೇ. 70ರಷ್ಟು ಭಾಗ ಕಾಜಿರಂಗ ನ್ಯಾಷನಲ್ ಪಾರ್ಕ್ ಹಾಗೂ ಇದರ 95 ಶಿಬಿರಗಳು ನೀರಿನಲ್ಲಿ ಮುಳುಗಡೆ ಆಗಿದ್ದು, ಪರಿಸ್ಥಿತಿ ಗಂಭೀರವಾಗಿರುವುದರಿಂದಾಗಿ ಅರಣ್ಯ ಅಧಿಕಾರಿಗಳು ಇಲಾಖೆಯ ಸಿಬ್ಬಂದಿಯನ್ನು ರಕ್ಷಣಾ ಕಾರ್ಯದಲ್ಲಿ ತೊಡಗುವಂತೆ ಆದೇಶಿಸಿದ್ದಾರೆ.
ಭಾರತದಲ್ಲಿನ ಕಾಜಿರಂಗ ನ್ಯಾಷನಲ್ ಪಾರ್ಕ್ ಪ್ರಪಂಚದಲ್ಲಿಯೇ ಅತಿ ಹೆಚ್ಚು ಸಂಖ್ಯೆಯ ಘೇಂಡಾಮೃಗಗಳನ್ನು ಹೊಂದಿದೆ. ಇಲ್ಲಿ ಇನ್ನಿತರ ಜೀವಿಗಳಾದ ಹುಲಿ ಮತ್ತು ಆನೆಗಳನ್ನು ಕಾಣಬಹುದಾಗಿದೆ. ಪ್ರಾಣಿ ಬೇಟೆಯನ್ನು ತಪ್ಪಿಸುವ ಉದ್ದೇಶದಿಂದ ಈಗಾಗಲೇ ಅರಣ್ಯ ಇಲಾಖೆ ಸಿಬ್ಬಂದಿ ನ್ಯಾಷನಲ್ ಹೈ ವೇ 37ರಲ್ಲಿ ಜಾಗೃತರಾಗಿದ್ದಾರೆ. ಅಸ್ಸೋಂನ ಕಾರೀಂಗಾಂಜ್ನಿಂದ ಪ್ರಾರಂಭವಾಗಿ ಮಣಿಪುರ್ನ ಬಾಲಿಯಲ್ಲಿ ಈ ಪಾರ್ಕ್ ಕೊನೆಗೊಳ್ಳುತ್ತದೆ.
ಪ್ರಾಣಿಗಳ ರಕ್ಷಣೆಯ ಉದ್ದೇಶದಿಂದಾಗಿ ಪಾರ್ಕ್ನ ಎದುರಿನ ಹೆದ್ದಾರಿಯಲ್ಲಿ ವಾಹನಗಳು ಸಂಚರಿಸುವ ಸಮಯದ ಕುರಿತು ವೇಳಾಪಟ್ಟಿ ಅಳವಡಿಸಿದ್ದು, ರಾತ್ರಿ ವೇಳೆಯೂ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಬಿಗಿ ಭದ್ರತೆ ಒದಗಿಸುತ್ತಿದ್ದಾರೆ.
ಈಗಾಗಲೇ ಭಾರತೀಯ ಸೈನ್ಯದೊಂದಿಗೆ ಎಸ್ಡಿಆರ್ಎಫ್ ಹಾಗೂ ನಾಗರಿಕ ಆಡಳಿತ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಬಾಕ್ಷ ಜಿಲ್ಲೆಯ ಬಾಲಿಪುರದ ಸುಮಾರು 150 ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಅಲ್ಲದೇ ಒಡಲ್ಗುರಿ ಗ್ರಾಮದಲ್ಲಿ ತಾತ್ಕಲಿಕ ಪ್ರವಾಹ ವಸತಿ ಶಿಬಿರ ನಿರ್ಮಿಸಿದ್ದು, ಇಲ್ಲಿಯವರೆಗೆ 55 ಮಹಿಳೆಯರು, 40 ಪುರುಷರು, 25 ಹಿರಿಯ ನಾಗರಿಕರು, 30 ಮಕ್ಕಳನ್ನು ರಕ್ಷಿಸಲಾಗಿದೆ. ಹಲವು ದಿನಗಳಿಂದ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಬೇಕಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.