ನವದೆಹಲಿ: ನೀತಿ ಸಂಹಿತೆ ಉಲ್ಲಂಘನೆ ಆರೋಪ ಎದುರಿಸುತ್ತಿದ್ದ ಪ್ರಧಾನಿ ಅವರಿಗೆ ಆರು ಪ್ರಕರಣಗಳಲ್ಲೂ ಕ್ಲೀನ್ಚಿಟ್ ನೀಡಿದ್ದ ಚುನಾವಣಾ ಆಯೋಗದ ಕ್ರಮ ತೀವ್ರ ಟೀಕೆಗೆ ಗುರಿಯಾಗಿತ್ತು. ಇದೀಗ ಆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ.
ಕೇಂದ್ರ ಚುನಾವಣಾ ಆಯೋಗ ತೆಗೆದುಕೊಂಡ ನಿರ್ಣಯಕ್ಕೆ ತಮ್ಮ ಸಹಮತ ಇಲ್ಲ ಎಂದು ಕೇಂದ್ರ ಚುನಾವಣಾ ಆಯೋಗದ ಮೂವರು ಆಯುಕ್ತರಲ್ಲಿ ಒಬ್ಬರಾದ ಅಶೋಕ್ ಲಾವಾಸ್ ಹೇಳಿದ್ದಾರೆ. ಈ ಸಂಬಂಧ ಅವರು ಮುಖ್ಯ ಚುನಾವಣಾ ಆಯುಕ್ತರನ್ನು ಉದ್ದೇಶಿಸಿ ಪತ್ರ ಬರೆದಿದ್ದು, ಸಂಚಲನ ಸೃಷ್ಟಿಸಿದೆ.
ನೀತಿ ಸಂಹಿತೆ ಉಲ್ಲಂಘಿಸಿದ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ನೀಡಿದ ಕ್ಲೀನ್ ಚಿಟ್ ಗೆ ತಮ್ಮ ಸಹಮತ ಇಲ್ಲ. ಮಾದರಿ ನೀತಿ ಸಂಹಿತೆಯ ಬಗ್ಗೆ ಚರ್ಚಿಸಲು ಚುನಾವಣಾ ಆಯೋಗದ ಸಭೆಗಳಲ್ಲಿ ಭಾಗವಹಿಸದಂತೆ ಸ್ವತಃ ನಮ್ಮನ್ನ ತಡೆಯಲಾಯಿತು. ಬಲವಂತವಾಗಿ ತಮ್ಮನ್ನು ಮೀಟಿಂಗ್ನಿಂದ ದೂರ ಇಡಲಾಯಿತು. ಹೀಗಾಗಿ ಆಯೋಗ ತೆಗೆದುಕೊಂಡ ನಿರ್ಧಾರ ಅಲ್ಪಮತದ ತೀರ್ಮಾನವಾಗುತ್ತದೆ. ಅಷ್ಟೇ ಅಲ್ಲ ಮೀಟಿಂಗ್ ಅಂಶಗಳನ್ನ ರಿಕಾರ್ಡ್ ಸಹ ಮಾಡಿಲ್ಲ ಎಂದು ದೂರಿ ಮೇ 4ರಂದು ಅಶೋಕ್ ಲಾವಾಸ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ ಎಂದು ಖಾಸಗಿ ಮಾಧ್ಯವಮವೊಂದು ವರದಿ ಮಾಡಿದೆ.
ಏಪ್ರಿಲ್ 1 ರಂದು ಮೋದಿ ವಾದ್ರಾದಲ್ಲಿ ಭಾಷಣ ಮಾಡಿದ್ದರು. ಈ ಭಾಷಣದಲ್ಲಿ ಅವರು ರಾಹುಲ್ ಗಾಂಧಿ ಅಲ್ಪಸಂಖ್ಯಾತರು ಹೆಚ್ಚಾಗಿರುವ ವಯನಾಡಿನಲ್ಲಿ ಸ್ಪರ್ಧೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಬಾಲಾಕೋಟ್ ದಾಳಿಯ ಪ್ರಸ್ತಾಪವನ್ನು ಮಾಡಿದ್ದರು. ಇದು ನೀತಿ ಸಂಹಿತೆ ಉಲ್ಲಂಘನೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಸಂಬಂಧದ ದೂರು ವಿಚಾರಣೆ ನಡೆಸಿದ್ದ ಚುನಾವಣಾ ಆಯೋಗ ಮೋದಿಗೆ ಕ್ಲೀನ್ಚಿಟ್ ನೀಡಿತ್ತು. ಒಟ್ಟು ಆರು ಪ್ರಕರಣಗಳಲ್ಲಿ ಪ್ರಧಾನಿಗೆ ಆಯೋಗ ಕ್ಲೀನ್ಚಿಟ್ ಕೊಟ್ಟಿತ್ತು.
ಈಗ ಮೂವರು ಆಯುಕ್ತರಲ್ಲಿ ಒಬ್ಬರಾದ ಅಶೋಕ್ ಲಾವಾಸ, ಚುನಾವಣಾ ಆಯೋಗದ ತೀರ್ಪು ಅರೆ ನ್ಯಾಯಾಂಗ ತೀರ್ಮಾನವಾಗಿರಲಿಲ್ಲ ಹಾಗೂ ಈ ಸಂಬಂಧ ತೆಗೆದುಕೊಂಡ ತೀರ್ಮಾನದ ರೆಕಾರ್ಡ್ ಮಾಡಿಲ್ಲ ಎಂದು ಆರೋಪಿಸಿದ್ದು, ಈ ತೀರ್ಮಾನಕ್ಕೆ ಯಾವುದೇ ಮಾನ್ಯತೆ ಇಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ ಎಂದು ವರದಿಯಾಗಿದೆ.