ಹೈದರಾಬಾದ್ (ತೆಲಂಗಾಣ): ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಹಮ್ಮದ್ ಅಲಿ ಜಿನ್ನಾರ ಮತ್ತೊಂದು ಅವತಾರ ಎಂದು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಆರೋಪಿಸಿ ವಾಗ್ದಾಳಿ ನಡೆಸಿದ್ದಾರೆ.
ತೆಲಂಗಾಣ ಜನತೆ ಅಭಿವೃದ್ಧಿಗೆ ಮತ ನೀಡಲಿದ್ದಾರೆ. ನಾವು ದೇಶದಲ್ಲಿ ಕುಟುಂಬ ರಾಜಕಾರಣವನ್ನು ತೊಡೆದುಹಾಕಿಲಿದ್ದೇವೆ. ಕಾಶ್ಮೀರದಲ್ಲಿ ಮೆಹಬೂಬಾ ಮಫ್ತಿ, ಉಮರ್ ಅಬ್ದುಲ್ಲಾರನ್ನು ಜನತೆಯೆ ಖಾಯಂ ಆಗಿ ಕ್ವಾರಂಟೈನ್ ಮಾಡಿದ್ದಾರೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ 100 ಸ್ಮಾರ್ಟ್ ಸಿಟಿ ಘೋಷಿಸಿ ಅದರಲ್ಲಿ ಹೈದರಾಬಾದ್ಗೂ ಅನುದಾನ ನೀಡಿದ್ದಾರೆ. ಆದರೆ, ಆ ಅನುದಾನ ಏನಾಯಿತು.? ಎಐಎಂಐಎಂ ಮುಖ್ಯಸ್ಥ ಓವೈಸಿ ಜಿನ್ನಾರ ಇನ್ನೊಂದು ಅವತಾರ. ಇಷ್ಟೇ ಅಲ್ಲ ಕೆಸಿಆರ್ ಮತ್ತು ಓವೈಸಿ ಒಂದೇ ನಾಣ್ಯದ ಎರಡು ಮುಖಗಳು ಎಂದಿದ್ದಾರೆ.
ಅಲ್ಲದೇ, ಕೆಸಿಆರ್ ಹೈದರಾಬಾದ್ ಅನ್ನು ಇಸ್ತಾಂಬುಲ್ ಆಗಿ ಪರಿವರ್ತಿಸಲು ಯತ್ನಿಸುತ್ತಿದ್ದಾರೆ. ಭಾರತದ ಹೈದರಾಬಾದ್ ಅನ್ನು ಪಾಕಿಸ್ತಾನದ ಹೈದರಾಬಾದ್ ಆಗಿ ಮಾಡಲು ಹೊರಟಿದ್ದಾರೆ. ಆದರೆ ನಾವು ಹೈದರಾಬಾದ್ ಅನ್ನು ಭಾಗ್ಯನಗರವನ್ನಾಗಿ ಮಾಡುತ್ತೇವೆಯೇ ಹೊರತು ಇಸ್ತಾಂಬುಲ್ ಆಗಿ ಅಲ್ಲ ಎಂದಿದ್ದಾರೆ.
ಓವೈಸಿಗೆ ಹಾಕುವ ಒಂದೊಂದು ಮತಗಳು ಭಾರತದ ವಿರುದ್ಧ ಚಲಾಯಿಸುವ ಮತಗಳಿದ್ದಂತೆ. ಓವೈಸಿ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ ಆದರೆ ಓಲ್ಡ್ ಹೈದರಾಬಾದ್ ಭಾಗದಲ್ಲಿ ಅಭಿವೃದ್ಧಿಯೇ ನಡೆದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ದಕ್ಷಿಣ ಭಾರತವನ್ನೂ ಕೇಸರಿಮಯ ಮಾಡುತ್ತೇವೆ: ತೇಜಸ್ವಿ ಸೂರ್ಯ