ನೋಯ್ಡಾ(ಉತ್ತರಪ್ರದೇಶ): ಕೊರೊನಾ ವೈರಸ್ ನಿಯಂತ್ರಣ ಹಿನ್ನೆಲೆ ಸಿಆರ್‌ಪಿಸಿ ಸೆಕ್ಷನ್ 144ರ ಅಡಿ ವಿಧಿಸಲಾದ ನಿರ್ಬಂಧಗಳನ್ನು ಉಲ್ಲಂಘಿಸಿ ಶುಕ್ರವಾರ ಗುಂಪು ನಮಾಜ್‌ಗೆ ಒಟ್ಟುಗೂಡಿದ ಆರೋಪದ ಮೇಲೆ ಏಳು ಜನರನ್ನು ನೋಯ್ಡಾದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಪ್ರಾರ್ಥನೆಗಾಗಿ ಗ್ರೇಟರ್ ನೋಯ್ಡಾದ ಜಾರ್ಚಾ ಪ್ರದೇಶದ ಕಲೋಂಡಾ ಗ್ರಾಮದ ಮಸೀದಿಯೊಳಗೆ ಸುಮಾರು 20-25 ಜನ ಜಮಾಯಿಸಿದ್ದರು. ಈ ಬಗ್ಗೆ ಸುಳಿವು ದೊರೆಯುತ್ತಿದ್ದಂತೆ ಪೊಲೀಸರ ಅಲ್ಲಿಗೆ ಹಾಜರಾಗಿದ್ದರು. ಆಗ ಅಲ್ಲಿದ್ದವರು ಪ್ರಾರ್ಥನೆಗಾಗಿ ತಯಾರಿ ನಡೆಸಿದ್ದರು. ಅವರಲ್ಲಿ ಏಳು ಮಂದಿಯನ್ನು ಈಗ ಬಂಧಿಸಲಾಗಿದೆ. ಪ್ರಾರ್ಥನೆಗೆ ನೇತೃತ್ವ ವಹಿಸಬೇಕಿದ್ದ ಪಾದ್ರಿ ಸೇರಿ ಉಳಿದವರು ಪರಾರಿಯಾಗಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಕೋವಿಡ್-19 ಹರಡುವುದನ್ನು ತಡೆಗಟ್ಟಲು ಇಲ್ಲಿನ ಗೌತಮ್ ಬುದ್ಧ ನಗರದಾದ್ಯಂತ ಸಿಆರ್‌ಪಿಸಿ ಸೆಕ್ಷನ್-144 ಜಾರಿಗೆ ತರಲಾಗಿದೆ. ಜೊತೆಗೆ ಅಧಿಕಾರಿಗಳು ಜನರಿಗೆ ಮನೆಯೊಳಗೇ ಇರಲು ಮತ್ತು ಧಾರ್ಮಿಕ ಅಥವಾ ರಾಜಕೀಯ ಕೂಟಗಳನ್ನು ತಪ್ಪಿಸಲು ಕರೆ ನೀಡುತ್ತಿದ್ದಾರೆ. ಆದರೂ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ.
ದೆಹಲಿಯ ಪಕ್ಕದಲ್ಲಿರುವ ಗೌತಮ್ ಬುದ್ಧನಗರದಲ್ಲಿ ಈವರೆಗೆ 64 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿವೆ. ಇದು ರಾಜ್ಯದ ಯಾವುದೇ ಜಿಲ್ಲೆಗಿಂತ ಅತಿ ಹೆಚ್ಚು ಎಂದು ಅಧಿಕೃತ ಅಂಕಿ-ಅಂಶಗಳು ತಿಳಿಸಿವೆ.