ನವದೆಹಲಿ: ಉಭಯ ದೇಶಗಳ ಮಧ್ಯದ ಮಿಲಿಟರಿ ಸಂಬಂಧವನ್ನು ಇನ್ನಷ್ಟು ಬಲಪಡಿಸುವ ಸಲುವಾಗಿ ಭಾರತದ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾನೆ ಅವರು ಇಂದು ಮ್ಯಾನ್ಮಾರ್ಗೆ ಭೇಟಿ ನೀಡಲಿದ್ದಾರೆ.
ಮ್ಯಾನ್ಮಾರ್ಗೆ ಎರಡು ದಿನಗಳ ಪ್ರವಾಸ ಕೈಗೊಳ್ಳಲಿರುವ ಸೇನಾ ಮುಖ್ಯಸ್ಥರು, ಪ್ರಮುಖ ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ಭಯೋತ್ಪಾದಕ ಗುಂಪುಗಳ ವಿರುದ್ಧ ಮತ್ತು ಉಭಯ ದೇಶಗಳ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುವಂತಹ ಶಕ್ತಿಗಳ ವಿರುದ್ಧ ಸಹಕಾರದ ಬಗ್ಗೆ ನೆರೆಯ ದೇಶದ ಜೊತೆ ಚರ್ಚಿಸಲಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಹಾಗೆಯೇ ಮ್ಯಾನ್ಮಾರ್ ಹೆಸರಾಂತ ನಾಯಕಿ ಮತ್ತು ರಾಜ್ಯ ಸಲಹೆಗಾರ ಆಂಗ್ ಸಾನ್ ಸೂಕಿ ಸೇರಿದಂತೆ ಹಲವು ನಾಯಕರನ್ನು ಭಾರತೀಯ ಸೇನಾ ಮುಖ್ಯಸ್ಥರು ಭೇಟಿ ಮಾಡಲಿದ್ದಾರೆ. ಮಾರ್ಚ್ನಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಹೆಚ್ಚಾದ ನಂತರ ಸೇನಾ ಮುಖ್ಯಸ್ಥರು ಯಾವುದೇ ವಿದೇಶಿ ಭೇಟಿ ಕೈಗೊಂಡಿರಲಿಲ್ಲ, ಲಡಾಕ್ ಮತ್ತು ಪಾಕಿಸ್ತಾನ ಗಡಿಯಲ್ಲಿನ ಪರಿಸ್ಥಿತಿಯನ್ನು ನಿಭಾಯಿಸುವತ್ತ ಹೆಚ್ಚು ಗಮನ ಹರಿಸಿದ್ದರು.
ಏಪ್ರಿಲ್-ಮೇ ತಿಂಗಳಲ್ಲಿ ಗಡಿಯಲ್ಲಿ ಚೀನಾ ಅತಿಕ್ರಮಣದ ನಂತರ, ಪೂರ್ವ ಲಡಾಕ್‌ನಲ್ಲಿ ಎಲ್ಒಸಿಯಲ್ಲಿ ಚೀನಾ ಪ್ರಾಬಲ್ಯ ಹೊಂದಿರುವ ಆರು ಸ್ಥಳಗಳನ್ನು ಭಾರತ ವಶಕ್ಕೆ ಪಡೆದುಕೊಂಡಿತು.