ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಭಾರಿ ಕಮಾಲ್ ಮಾಡಿದ್ದಾರೆ. ಕಳೆದ ಬಾರಿಯ ಚುನಾವಣೆ ಫಲಿತಾಂಶ ಮರುಕಳಿಸದಿದ್ದರೂ ಮೂರನೇ ಎರಡರಷ್ಟು ಬಹುಮತದ ಹತ್ತಿರ ಬಂದಿದೆ. ಲೋಕಸಭಾ ಚುನಾವಣೆ ಬಳಿಕ ಎಚ್ಚೆತ್ತುಕೊಂಡ ಕೇಜ್ರಿವಾಲ್ ಪವಾಡವನ್ನೇ ಸೃಷ್ಟಿಸಿದ್ದಾರೆ.
ಮೋದಿ ವಿರುದ್ಧ ಕಳೆದೊಂದು ವರ್ಷದಿಂದ ಟೀಕೆಗೆ ಇಳಿಯದೇ ಮೌನಕ್ಕೆ ಶರಣಾದ ಅರವಿಂದ್ ಕೇಜ್ರಿವಾಲ್, ಮತದಾರರನ್ನು ಸೆಳೆಯಲು ತಮ್ಮದೇ ಆದ ತಂತ್ರ ಅನುಸರಿಸಿದರು. ಸತತವಾಗಿ ಜನಪರ ಯೋಜನೆಗಳ ಘೋಷಣೆ ಮಾಡಿದರು. ಶಿಕ್ಷಣ, ನೀರು, ವಿದ್ಯುತ್, ಮಹಿಳೆಯರಿಗೆ ಫ್ರೀ ಪಯಣ ಹೀಗೆ ಎಲ್ಲ ಬಗೆಯ ಯೋಜನೆಗಳನ್ನ ಸದ್ದಿಲ್ಲದೇ ಜಾರಿಗೆ ತಂದರು.
ಸರ್ಕಾರ ರಚಿಸಿದ ಆರಂಭದಲ್ಲಿ ತಮ್ಮ ಪ್ರತಿಭಟನೆ ಮಾಡಿ ಸದ್ದು ಮಾಡುತ್ತಿದ್ದ ಅವರು, ಬಳಿಕ ಎಚ್ಚೆತ್ತುಕೊಂಡರು. ಜನಪರ ಕಾಳಜಿಯತ್ತ ಗಮನ ಹರಿಸಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಜೆಪಿ ವಿರುದ್ಧ ಸಿಎಎ ವಿರೋಧಿ ಅಸ್ತ್ರ ಪ್ರಯೋಗ
ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಸ್ತ್ರವಾಗಿ ಬಳಸಿಕೊಂಡಿದ್ದು ಬಹುತೇಕ ಫಲ ನೀಡಿದೆ. ಇದರ ಮಧ್ಯೆ ಶಾಹಿನ್ ಬಾಗ್ ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುತ್ತಿದ್ದು, ಆಪ್ ಸರ್ಕಾರಕ್ಕೆ ಇದು ಪ್ಲಸ್ ಪಾಯಿಂಟ್ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿಯಲ್ಲಿ ಸ್ಥಳೀಯ ನಾಯಕತ್ವದ ಕೊರತೆ: ಮೋದಿ - ಶಾ ಜೋಡಿ ರಾಷ್ಟ್ರಕ್ಕಾದರೆ, ದೆಹಲಿಯಲ್ಲಿ ಅಂತಹುದೇ ಚಾರ್ಮ್ ಉಳ್ಳ ನಾಯಕರ ಕೊರತೆ ಬಿಜೆಪಿಯನ್ನ ಕಾಡಿತು. ಕೇಜ್ರಿವಾಲ್ ಸಮಾನವಾಗಿ ನಿಲ್ಲುವ ಮತ್ತೊಬ್ಬ ನಾಯಕ ದಿಲ್ಲಿ ಬಿಜೆಪಿಯಲ್ಲಿ ಇರದಿರುವುದು ಪಕ್ಷಕ್ಕೆ ದೊಡ್ಡ ನಷ್ಟವನ್ನೇ ಉಂಟು ಮಾಡಿತು. ಮನೋಜ್ ತಿವಾರಿ, ಕೇಂದ್ರ ಸಚಿವ ಹರ್ಷವರ್ಧನ್ ಕೇಜ್ರಿ ವಿರುದ್ಧ ಜನರ ಮನಸ್ಸಲ್ಲಿ ಕಮಾಲ್ ಮಾಡುವಲ್ಲಿ ವಿಫರಾದರು.
ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ: ಇನ್ನು ಕೇಜ್ರಿವಾಲ್ ಘೋಷಿಸಿದ ಜನಪ್ರೀಯ ಯೋಜನೆಗಳ ಮುಂದೆ ಕಮಲ ಪಾಳಯ ಏನೂ ಮಾಡದಂತಹ ಪರಿಸ್ಥಿತಿ ತಂದೊಡ್ಡಿತು. ಇನ್ನು ಕಾಂಗ್ರೆಸ್ ದೆಹಲಿ ಚುನಾವಣೆ ಅಖಾಡದಲ್ಲೇ ಉಳಿಯದಂತಾಯಿತು. ಕಾಂಗ್ರೆಸ್ ಆಟದಲ್ಲೇ ಇರದಿರುವುದು ಆಮ್ ಆದ್ಮಿ ಪಾರ್ಟಿಗೆ ದೊಡ್ಡ ವರವಾಗಿ ಪರಿಣಮಿಸಿದ್ದಂತೂ ಸುಳ್ಳಲ್ಲ.