ಮುಂಬೈ( ಮಹಾರಾಷ್ಟ್ರ): ಅನ್ವಯ್ ನಾಯಕ್ ಆತ್ಮಹತ್ಯೆ ಪ್ರಕರಣದ ವಿಚಾರಣೆ ಇಂದು ಅಲಿಬಾಗ್ ನ್ಯಾಯಾಲಯದಲ್ಲಿ ಪ್ರಾರಂಭವಾಯಿತು. ಪತ್ರಕರ್ತ ಅರ್ನಾಬ್ ಗೋಸ್ವಾಮಿ ಸೇರಿದಂತೆ ಇಬ್ಬರೂ ವಿಚಾರಣೆಗೆ ಗೈರು ಹಾಜರಾಗಿದ್ದರು.
ಆದ್ದರಿಂದ ಮಾರ್ಚ್ 10 ರಂದು ಮೂವರು ಆರೋಪಿಗಳಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಮುಖ್ಯ ನ್ಯಾಯಮೂರ್ತಿ ಸುನೈನಾ ಪಿಂಗಲೆ ಅವರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಒಂದು ವೇಳೆ ಅಂದು ಹಾಜರಾಗದಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಡ್ಜ್ ನಿರ್ದೇಶನ ನೀಡಿದ್ದಾರೆ.
ಈ ಪ್ರಕರಣವನ್ನು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದ್ದು, ಮಾರ್ಚ್ 10 ರಂದು ನಡೆಯುವ ವಿಚಾರಣೆಗೆ ಅರ್ನಬ್ ಗೋಸ್ವಾಮಿ ಅವರೊಂದಿಗೆ ಫಿರೋಜ್ ಶೇಖ್ ಮತ್ತು ನಿತೇಶ್ ಸರ್ದಾ ಹಾಜರಾಗಬೇಕಾಗುತ್ತದೆ ಎಂದು ವಕೀಲ ಪ್ರದೀಪ್ ಘರತ್ ತಿಳಿಸಿದ್ದಾರೆ.
ರಾಯಗಢ ಪೊಲೀಸರು ಡಿಸೆಂಬರ್ 4 ರಂದು ಅನ್ವಯ್ ನಾಯಕ್ ಆತ್ಮಹತ್ಯೆ ಪ್ರಕರಣದಲ್ಲಿ ಹೊಸ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಅರ್ನಾಬ್ ಗೋಸ್ವಾಮಿ ಮತ್ತು ಫಿರೋಜ್ ಶೇಖ್ ಮತ್ತು ನಿತೇಶ್ ಸರ್ದಾ ಅವರನ್ನು ಜನವರಿ 7 ರಂದು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯವು ಸಮನ್ಸ್ ನೀಡಿತ್ತು.
ಆದರೆ, ಜನವರಿ 7 ರಂದು ಮೂವರು ಆರೋಪಿಗಳು ಗೈರು ಹಾಜರಾಗಿದ್ದರು. ಫೆಬ್ರವರಿ 6 ರಂದು ನಡೆದ ವಿಚಾರಣೆಯ ವೇಳೆ ಮೂವರು ಆರೋಪಿಗಳ ವಕೀಲರು ಆರೋಪಿಗಳ ಅನುಪಸ್ಥಿತಿಯಲ್ಲಿ ಅರ್ಜಿ ಸಲ್ಲಿಸಿದ್ದರು.