ಬಲರಾಂಪುರ್(ಉತ್ತರ ಪ್ರದೇಶ): ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇದರ ಬೆನ್ನಲ್ಲೇ ಯುಪಿಯಲ್ಲಿ ಮತ್ತೊಂದು ಅಮಾನವೀಯ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.
ಬಲರಾಂಪುರ್ದಲ್ಲಿ 22 ವರ್ಷದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಕೇವಲ ಒಂದೇ ವಾರದಲ್ಲಿ ನಡೆದಿರುವ ಎರಡನೇ ಘಟನೆ ಇದಾಗಿದೆ. ಕಾಲೇಜಿಗೆ ಪ್ರವೇಶಾತಿ ಪಡೆದುಕೊಳ್ಳುವ ಉದ್ದೇಶದಿಂದ ತೆರಳಿದ್ದ ವಿದ್ಯಾರ್ಥಿನಿಯ ಅಪಹರಣ ಮಾಡಿರುವ ದುಷ್ಕರ್ಮಿಗಳು ಅತ್ಯಾಚಾರವೆಸಗಿ, ಚಿತ್ರಹಿಂಸೆ ನೀಡಿದ್ದಾರೆ.
ವಿದ್ಯಾರ್ಥಿನಿ ಬೆಳಗ್ಗೆ 7 ಗಂಟೆಗೆ ಕಾಲೇಜ್ಗೆ ಪ್ರವೇಶಾತಿ ಪಡೆದುಕೊಳ್ಳಲು ತೆರಳಿದ್ದಾಳೆ. ಈ ವೇಳೆ, ಆಕೆಯ ಅಪಹರಣ ಮಾಡಿರುವ ದುಷ್ಕರ್ಮಿಗಳು ನಿರ್ಜನ್ಯ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ. ಪ್ರಜ್ಞೆ ತಪ್ಪಿರುವ ವಿದ್ಯಾರ್ಥಿನಿಯ ಕಾಲು, ಸೊಂಟ ಮುರಿದು ಹೋಗಿದ್ದು, ಆಕೆಯನ್ನ ಇ - ರಿಕ್ಷಾದಲ್ಲಿ ಮನೆಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಮಗಳನ್ನ ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಿದ್ದು, ಆದರೆ ಆಕೆ, ಸಾವನ್ನಪ್ಪಿದ್ದಾಳೆ ಎಂದು ಸಂತ್ರಸ್ತೆ ತಾಯಿ ಕಣ್ಣೀರು ಹಾಕಿದ್ದಾಳೆ. ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದ್ದು, ಪೊಲೀಸರು ಕೂಡ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.
ಉತ್ತರ ಪ್ರದೇಶದಲ್ಲಿ ಮೇಲಿಂದ ಮೇಲೆ ಅತ್ಯಾಚಾರದಂತಹ ಹೇಯ ಕೃತ್ಯಗಳು ನಡೆಯುತ್ತಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಅಲ್ಲಿನ ಕಾನೂನು ಸುವ್ಯವಸ್ಥೆ ಮೇಲೆ ಪ್ರಶ್ನೆ ಉದ್ಭವವಾಗಿದೆ.