ಕರೀಂನಗರ: ಕೆಲ ದಿನಗಳ ಹಿಂದೆಯಷ್ಟೇ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆ ಅಬ್ದುಲ್ಲಾಪುರ ಎಂಬಲ್ಲಿ ಮಹಿಳಾ ತಹಶೀಲ್ದಾರ್ ವಿಜಯಾ ರೆಡ್ಡಿ ಎಂಬುವರನ್ನು ಅವರ ಕಚೇರಿ ಎದುರಲ್ಲೇ ಜೀವಂತವಾಗಿ ಬೆಂಕಿಹಚ್ಚಿ ಕೊಂದು ಹಾಕಲಾಗಿತ್ತು. ಅಂತಹದ್ದೇ ವಿಫಲಯತ್ನ ಒಂದು ಕರೀಂನಗರದಲ್ಲಿ ನಡೆದಿದೆ.
ತೆಲಂಗಾಣದಲ್ಲಿ ಕೋಪಗೊಂಡ ರೈತನೋರ್ವ ತಹಶೀಲ್ದಾರ್ ಮೇಲೆ ಪೆಟ್ರೋಲ್ ಎರಚಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕರೀಂನಗರದ ಚಿಗುರುಮಾಮಿಡಿಯಲ್ಲಿರುವ ತಹಶೀಲ್ದಾರ್ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಕೃತ್ಯ ಎಸಗಿದ ರೈತನನ್ನು ಕನಕಯ್ಯ ಎಂದು ಗುರುತಿಸಲಾಗಿದೆ. ಮಂಡಲ ಕಂದಾಯ ಅಧಿಕಾರಿ (ಎಂಆರ್‌ಒ) ಕಚೇರಿಯ ಸಿಬ್ಬಂದಿಯೋರ್ವ ರೈತನಿಗೆ ಪಾಸ್‌ಬುಕ್ ನೀಡದ ಕಾರಣ ಆಕ್ರೋಶಗೊಂಡು ಪೆಟ್ರೋಲ್ ಎರಚಿದ್ದಾನೆ. ಕನಕಯ್ಯ ಮತ್ತು ಆತನ ಸಹೋದರರ ನಡುವಿನ ಜಮೀನು ವಿವಾದದಿಂದಾಗಿ ಅವರ ಪಾಸ್ ಬುಕ್‌ನ ಮಂಜೂರು ಮಾಡಲು ಸಾಧ್ಯವಾಗಲಿಲ್ಲ ಎಂದು ಸಿಬ್ಬಂದಿ ಘಟನೆಯ ಬಳಿಕ ಸ್ಪಷ್ಟನೆ ನೀಡಿದ್ದಾರೆ.
ಜಂಟಿ ಕಲೆಕ್ಟರ್ ಶ್ಯಾಮ್ಪ್ರಸಾದ್ ಲಾಲ್ ಅವರು ಘಟನೆ ಬಗ್ಗೆ ಮೇಲಧಿಕಾರಿ ಕಲೆಕ್ಟರ್ ಸರ್ಫರಾಜ್ ಅಹ್ಮದ್ ಅವರಿಗೆ ವರದಿ ಮಾಡಿದ್ದು, ಆ ನಂತರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.