ನವದೆಹಲಿ: ವೈದ್ಯಕೀಯ ಸಿಬ್ಬಂದಿ ಮೇಲೆ ನಡೆಸಲಾದ ಹಲ್ಲೆ ಬಗ್ಗೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಬೇಸರ ವ್ಯಕ್ತಪಡಿಸಿ, ಇಂದು ಬ್ಲಾಕ್ ಡೇ ಆಚರಿಸುವುದಾಗಿ ಕರೆ ನೀಡಿರುವ ಹಿನ್ನೆಲೆ, ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿಡಿಯೋ ಕಾನ್ಫರೆನ್ಸ್ ಮುಖಾಂತರ ಐಎಂಎ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಜನರಿಗೋಸ್ಕರ ನೀವು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದುದು ಎಂದು ಹಾಡಿ ಹೊಗಳಿದ್ದಾರೆ.
ಬೆಂಗಳೂರಿನ ಪಾದರಾಯನಪುರದಲ್ಲಿ ನಡದ ವೈದ್ಯಕೀಯ ಸಿಬ್ಬಂದಿ ಮೇಲಿನ ಹಲ್ಲೆಯ ಬಗ್ಗೆ ತೀವ್ರ ಬೇಸರಗೊಂಡಿದ್ದ ಭಾರತೀಯ ವೈದ್ಯಕೀಯ ಸಂಘ, ಇಂದು ರಾತ್ರಿ ಎಲ್ಲ ಆಸ್ಪತ್ರೆಗಳಲ್ಲಿ ಮೇಣದ ಬತ್ತಿ ಹಚ್ಚುವ ಮೂಲಕ ಕಪ್ಪು ದಿನವನನ್ನು ಆಚರಿಸಬೇಕು, ಕೇಂದ್ರ ಸರ್ಕಾರ ವೈದ್ಯಕೀಯ ಸಿಬ್ಬಂದಿ ಮೇಲಿನ ದೌರ್ಜನ್ಯಗಳನ್ನು ತಡೆಯಲು ಸುಗ್ರೀವಾಜ್ಞೆ ಹೊರಡಿಸಬೇಕು, ಇಲ್ಲವಾದಲ್ಲಿ ಗುರುವಾರದಂದು ಕರಾಳ ಕಪ್ಪು ದಿನವನ್ನಾಗಿ ಆಚರಿಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.
ಇದರಿಂದ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ, ಇಂದು ಐಎಂಎ ವೈದ್ಯರೊಂದಿಗೆ ಸಭೆ ನಡೆಸಿದ್ದು, ಆರೋಗ್ಯ ಇಲಾಖಾ ಸಿಬ್ಬಂದಿಗೆ ಬೇಕಾಗುವ ಎಲ್ಲ ಭದ್ರತೆಗಳನ್ನು ನೀಡಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.
"ನಮ್ಮ ಬಳಿ ಇರುವ ಬಿಳಿ ಬಣ್ಣ ಎಂದಿಗೂ ಕೆಂಪು ಬಣ್ಣಕ್ಕೆ ತಿರುಗಬಾರದು" ಎಂದು ಐಎಂಎ ತನ್ನ ಇತರ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ್ದು, ಆರೋಗ್ಯ ವೃತ್ತಿಪರರ ರಕ್ಷಣೆಗಾಗಿ ಸುಗ್ರೀವಾಜ್ಞೆಯ ಮೂಲಕ ಕೇಂದ್ರ ಸರ್ಕಾರ ವಿಶೇಷ ಕಾನೂನನ್ನು ಜಾರಿಗೆ ತರಬೇಕೆಂದು ನಿನ್ನೆಯ ದಿನ ಆಗ್ರಹಿಸಿತ್ತು.