ವಾಷಿಂಗ್ಟನ್(ಅಮೆರಿಕ): ಅಮೆರಿಕ ಸರ್ಕಾರ ಅಲ್ಲಿನ ಜನತೆಗೆ ಕೊರೊನಾ ವೈರಸ್ನಿಂದ ಕಾಪಾಡಿಕೊಳ್ಳಲು ಮಾಸ್ಕ್ ಧರಿಸುವಂತೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ. ಸಂಶೋಧನೆಯೊಂದರ ಪ್ರಕಾರ, ಉಸಿರಾಡುವ ಗಾಳಿಯಿಂದ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಕುರಿತಂತೆ ಮಾತನಾಡಿರುವ ಅಮೆರಿಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಮುಖ್ಯಸ್ಥ ಅಂಥೋನಿ ಫೌಸಿ, ಮಾಸ್ಕ್ ಧರಿಸುವುದು ಸ್ವಯಂ ಜವಾಬ್ದಾರಿ. ಅವರವರ ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮ ಅಗತ್ಯ. ಇತ್ತೀಚಿನ ಸಂಶೋಧನೆ ಕೆಮ್ಮುವುದರಿಂದ ಕೊರೊನಾ ಸಾಧ್ಯತೆ ಬಗ್ಗೆ ಹೇಳಿರುವುದರಿಂದ ಮುಂಜಾಗ್ರತೆಯಿಂದಿರುವುದು ಒಳ್ಳೆಯದು ಎಂದಿದ್ದಾರೆ.
ಕೇವಲ 24 ಗಂಟೆಗಳಲ್ಲಿ 1,500ಕ್ಕೂ ಹೆಚ್ಚು ಮಂದಿ ಅಮೆರಿಕದಲ್ಲಿ ಕೊರೊನಾಗೆ ಬಲಿಯಾಗಿದ್ದಾರೆ. ಈವರೆಗೂ ಒಟ್ಟು 7,402 ಮಂದಿ ಕೊರೊನಾಗೆ ಬಲಿಯಾಗಿದ್ದು, ಸುಮಾರು 2,77,475 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೇವಲ 12 ಸಾವಿರ ಮಂದಿ ಚಿಕಿತ್ಸೆ ಪಡೆದು ಕೊರೊನಾದಿಂದ ಗುಣಮುಖರಾಗಿದ್ದಾರೆ.
ನ್ಯೂಯಾರ್ಕ್ ನಗರದಲ್ಲೇ ಈವರೆಗೂ ಸುಮಾರು 3 ಸಾವಿರ ಮಂದಿ ಬಲಿಯಾಗಿದ್ದು, ಸುಮಾರು 2,77,475 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
2001ರ ಸೆಪ್ಟೆಂಬರ್ ತಿಂಗಳ 11ರಂದು ನ್ಯೂಯಾರ್ಕ್ನ ಗಗನಚುಂಬಿ ಕಟ್ಟಡಗಳ ಮೇಲೆ ಭಯೋತ್ಪಾದಕರು ವೈಮಾನಿಕ ದಾಳಿ ನಡೆಸಿ ಮೂರು ಸಾವಿರ ಮಂದಿಯನ್ನು ಕೊಂದಿದ್ದರು. ಈಗ ಕೊರೊನಾಗೆ ಮೂರು ಸಾವಿರ ಮಂದಿ ನ್ಯೂಯಾರ್ಕ್ ನಗರದಲ್ಲಿ ಬಲಿಯಾಗಿದ್ದಾರೆ.