ಚೆನ್ನೈ: ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಗಗನ ಯಾತ್ರಿ ಡಾನ್ ಥಾಮಸ್ ಅವರು ಬೆಂಗಳೂರಿನ ವಿವಿಧ ಶಾಲೆ, ಕಾಲೇಜಿನ ಮಕ್ಕಳೊಂದಿಗೆ ಸಂವಾದ ನಡೆಸಿ ಗಗನ ಯಾತ್ರೆ ಕುರಿತು ತಮಗಿರುವ ಅನುಭವವನ್ನು ಹಂಚಿಕೊಂಡರು.
ಚೆನ್ನೈನಲ್ಲಿರುವ ಅಮೆರಿಕ ಕಾನ್ಸುಲೆಟ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು, ಚೆನ್ನೈನ ಶಾಲೆ, ಕಾಲೇಜುಗಳಿಂದ ಬಂದ ಸುಮಾರು 70ಕ್ಕೂ ಹೆಚ್ಚು ಮಕ್ಕಳೊಟ್ಟಿಗೆ ಥಾಮಸ್ ಅವರು ಕಾಲ ಕಳೆದರು.
ಥಾಮಸ್ ಅವರು ಅಮೆರಿಕದ ನಾಸಾ ಕಳುಹಿಸಿದ್ದ ಸ್ಪೇಸ್ ಶಟಲ್ ಬಾಹ್ಯಾಕಾಶ ಯಾನದಲ್ಲಿ ಪಾಲ್ಗೊಂಡಿದ್ದರು. ಭೂಮಿಯ ಕಕ್ಷೆಯನ್ನು 692 ಬಾರಿ ಸುತ್ತಿದ ಅನುಭವ ಹೊಂದಿದ್ದಾರೆ.
ಚಿಕ್ಕವನಾಗಿದ್ದಾಗ ಬಾಹ್ಯಾಕಾಶದಲ್ಲಿ ತೇಲಾಡಬೇಕೆಂಬ ಕನಸು ಕಂಡಿದ್ದೆ. ಅಮೆರಿಕದ ಬಾಹ್ಯಾಕಾಶ ಯೋಜನೆಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದೆ. ಆಸಕ್ತಿ ಹೆಚ್ಚಾಗುತ್ತಿದ್ದಂತೆ ಕನಸಿನ ತೀವ್ರತೆ ಹೆಚ್ಚಾಗುತ್ತಾ ಹೋಯಿತು. ನಾಲ್ಕು ಸಾರಿ ನಾಸಾ ಕದ ಬಡಿದು ಪ್ರಯೋಜನ ಇಲ್ಲ ಎಂದು ವಾಪಸ್ ಹೋಗಿದ್ದೆ. ಸ್ಪೇಸ್ ಶಟಲ್ ಯೋಜನೆಯ ಮೂಲಕ ನನ್ನ ಕನಸು ನನಸಾಯಿತು ಎಂದು ಅವರು ಸ್ಮರಿಸಿದ್ದಾರೆ.
ಭಾರತೀಯ ಗಗನಯಾತ್ರಿಗಳಾದ ರಾಕೇಶ್ ಶರ್ಮಾ, ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ಅವರನ್ನು ಸ್ಮರಿಸಿದ ಥಾಮಸ್ ಅವರು, ಭಾರತ ಹಮ್ಮಿಕೊಂಡಿರುವ ಚಂದ್ರಯಾನ 2 ಯೋಜನೆಯ ಬಗ್ಗೆ ತುಂಬ ಕುತೂಹಲ ಇದೆ ಎಂದು ಹೇಳಿಕೊಂಡಿದ್ದಾರೆ.