ಶ್ರೀನಗರ: ಕಣಿವೆ ನಾಡು ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ ವದಂತಿ ಹಿನ್ನಲೆಯಲ್ಲಿ ಅಮರನಾಥ ಯಾತ್ರೆ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದ್ದು, ಈ ಮಧ್ಯೆ ಪ್ರವಾಸಕ್ಕೆಂದು ತೆರಳಿದ್ದ ಪ್ರವಾಸಿಗರು ಇದೀಗ ದಿಢೀರ್ ಆಗಿ ವಾಪಸ್ ಆಗುತ್ತಿರುವ ಕಾರಣ ಪ್ಲೈಟ್ ಟಿಕೆಟ್ ದರ ಗಗನಮುಖಿಯಾಗಿವೆ.
ಕಣಿವೆ ನಾಡಿನಲ್ಲಿ ಕಳೆದ ಕೆಲ ದಿನಗಳಿಂದ ಉಗ್ರರ ಚಟುವಟಿಕೆ ನಡೆಯುತ್ತಿರುವ ಕಾರಣ ಗೃಹ ಇಲಾಖೆ ಅಮರನಾಥ ಯಾತ್ರೆ ರದ್ಧುಗೊಳಿಸಿ ಆದೇಶ ಹೊರಡಿಸಿದ್ದು, ಕೆಲವೊಂದು ಪ್ರದೇಶಗಳಲ್ಲಿ ಶಸ್ತ್ರಾಸ್ತ್ರಗಳು ಲಭ್ಯವಾಗಿವೆ. ಹೀಗಾಗಿ ಭಯಗೊಂಡಿರುವ ಪ್ರವಾಸಿಗರು ತಕ್ಷಣವೇ ತಮ್ಮ ಊರುಗಳಿಗೆ ಮರಳುತ್ತಿರುವ ಕಾರಣ, ಪ್ಲೈಟ್ ಟಿಕೆಟ್ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಿದೆ
ಶ್ರೀನಗರದಿಂದ ನೇರವಾಗಿ ದೆಹಲಿಗೆ ತೆರಳುತ್ತಿರುವ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಗಳಾದ ಇಂಡಿಗೋ, ಸ್ಪೈಸ್ಜೆಟ್,ಗೋ ಏರ್ ಹಾಗೂ ಏರ್ ಏಷ್ಯಾ ವಿಮಾನಗಳು ಪ್ರತಿ ಟಿಕೆಟ್ಗಳಿಗೆ 10 ಸಾವಿರದಿಂದ 22 ಸಾವಿರದವರೆಗೆ ಚಾರ್ಜ್ ಮಾಡುತ್ತಿವೆ. ಆದರೆ ಈ ಟಿಕೆಟ್ಗಳ ನಿಜವಾದ ಬೆಲೆ 3 ಸಾವಿರ ರೂಪಾಯಿ ಅಷ್ಟೇ!
ಶ್ರೀನಗರದಿಂದ ಜಮ್ಮುವಿಗೆ ಪ್ರಯಾಣ ಬೆಳೆಸಲು ವಿಮಾನಯಾನ ಸಂಸ್ಥೆಗಳು 16 ಸಾವಿರ ಹಣ ಪಡೆದುಕೊಳ್ಳುತ್ತಿವೆ. ಉಳಿದಂತೆ ಅಮೃತಸರ,ಚಂಡೀಗಢ, ಜೈಪುರದಂತಹ ಪ್ರದೇಶಗಳಿಗೆ ಹೋಗುವ ಪ್ರವಾಸಿಗರಿಂದ 10 ಸಾವಿರದಿಂದ 19 ಸಾವಿರದವರೆಗೆ ಹಣ ಪಡೆದುಕೊಳ್ಳುತ್ತಿವೆ ಎಂದು ತಿಳಿದು ಬಂದಿದೆ.