ನವದೆಹಲಿ: ವಿಮಾನ ಸಿಬ್ಬಂದಿಯ ಕೋವಿಡ್ -19 ಪರೀಕ್ಷೆಗಳನ್ನು ಸಮಯಕ್ಕೆ ಸರಿಯಾಗಿ ಮಾಡದ ಕಾರಣ ವಂದೇ ಭಾರತ್ ಮಿಷನ್ ಅಡಿ ಏರ್ ಇಂಡಿಯಾದ ವಾಪಸಾತಿ ವಿಮಾನಗಳನ್ನು ಬುಧವಾರ ಕಳುಹಿಸಲು ಸಾಧ್ಯವಾಗಿಲ್ಲ ಎಂದು ಹಿರಿಯ ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.
ಲಾಕ್‌ಡೌನ್ ಮಧ್ಯೆ ವಿದೇಶದಲ್ಲೇ ಸಿಕ್ಕಿಬಿದ್ದ ಭಾರತೀಯರನ್ನು ವಿದೇಶದಿಂದ ಕರೆತರಲು ವಂದೇ ಭಾರತ್ ಮಿಷನ್ ಯೋಜಿಸಿದೆ. ಆದರೆ, ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿ ಸದಸ್ಯರಿಗೆ ಕೋವಿಡ್ -19 ಪರೀಕ್ಷೆಗಳನ್ನು ಸಮಯಕ್ಕೆ ಸರಿಯಾಗಿ ಮಾಡಲಾಗಿಲ್ಲ. ಇದರ ಪರಿಣಾಮವಾಗಿ ಎರಡೂ ವಿಮಾನಗಳನ್ನು 48 ಗಂಟೆಗಳ ಕಾಲ ಮುಂದೂಡಲಾಗಿದ್ದು, ಮಿಷನ್ ಅಡಿ ವಿಮಾನಗಳು ಶುಕ್ರವಾರದಿಂದ ಕಾರ್ಯ ನಿರ್ವಹಿಸಲು ಪ್ರಾರಂಭಿಸಲಿವೆ ಎಂದು ತಿಳಿಸಿದರು.
ಏರ್ ಇಂಡಿಯಾದ ಮೊದಲ ವಿಮಾನ ಬುಧವಾರ ಮುಂಜಾನೆ 3.30ಕ್ಕೆ ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳಬೇಕಿತ್ತು. ಎರಡನೇ ವಿಮಾನ ಬುಧವಾರ ಬೆಳಗ್ಗೆ 6.30 ಕ್ಕೆ ಮುಂಬೈಯಿಂದ ಲಂಡನ್‌ಗೆ ತೆರಳಬೇಕಿತ್ತು. ಸದ್ಯ ಈ ವಿಮಾನಗಳ ವೇಳಾಪಟ್ಟಿ ಮರು ನಿಗದಿ ಮಾಡಿದ್ದು, ವಿಮಾನವು ಮುಂಬೈಯಿಂದ ಲಂಡನ್‌ಗೆ ಶುಕ್ರವಾರ ಬೆಳಗ್ಗೆ 6.30ಕ್ಕೆ ಹೊರಡಲು ನಿರ್ಧರಿಸಿದ್ದರೆ, ಸ್ಯಾನ್ ಫ್ರಾನ್ಸಿಸ್ಕೋಗೆ ಶುಕ್ರವಾರ ಮುಂಜಾನೆ 3.30 ಕ್ಕೆ ಹೊರಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ, ಗುರುವಾರ ರಾತ್ರಿ 11.15 ಕ್ಕೆ ದೆಹಲಿಯಿಂದ ಹೊರಡಬೇಕಿದ್ದ ಸಿಂಗಾಪುರಕ್ಕೆ ಏರ್ ಇಂಡಿಯಾ ವಿಮಾನ ಮಾತ್ರ ನಿಗದಿತ ಸಮಯಕ್ಕೆ ತೆರಳಲಿದೆ. ಆದರೆ
ಗುರುವಾರ ನಿಗದಿಯಾಗಿದ್ದ ಇತರ ವಿಮಾನಗಳನ್ನೂ ಶುಕ್ರವಾರಕ್ಕೆ ಮುಂದೂಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.