ನವದೆಹಲಿ: ಕೊರೊನಾ ಪ್ರಭಾವದಿಂದಾಗಿ ಜುಲೈ ವರೆಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಆದಾಯದಲ್ಲಿ 88 ರಷ್ಟು ಭಾರಿ ಕುಸಿತ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್, ನೌಕರರಿಗೆ ವೇತನ ಕಡಿತಗೊಳಿಸುವ ಯೋಜನೆಯನ್ನು ಪ್ರಕಟಿಸಿದ್ದು, ಪೈಲಟ್ ಭತ್ಯೆಯನ್ನು 40 ರಷ್ಟು ಕಡಿಮೆ ಮಾಡಲಾಗಿದೆ.
ಈ ಸಂಬಂಧ ಮಾನವ ಸಂಪನ್ಮೂಲ ಮುಖ್ಯಸ್ಥ ಟಿ.ವಿಜಯಕೃಷ್ಣನ್ ಈ ಸಂಬಂಧ ಸುತ್ತೋಲೆ ಹೊರಡಿಸಿದ್ದಾರೆ. ಕಂಪನಿಯ ಮೇಲೆ ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಪ್ರತಿಕೂಲ ಪರಿಣಾಮ ಬೀರಿದೆ. ಈ ಪರಿಣಾಮ ಜುಲೈ ತಿಂಗಳವರೆಗಿನ ವಿಮಾನಯಾನ ಆದಾಯವು ಶೇಕಡಾ 88 ರಷ್ಟು ಕುಸಿದಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
"ನಿಮಗೆಲ್ಲರಿಗೂ ತಿಳಿದಿರುವಂತೆ, ನಮ್ಮ ಮೂಲ ಕಂಪನಿಯಾದ ಏರ್ ಇಂಡಿಯಾ ಸಹ ಉದ್ಯೋಗಿಗಳಿಗೆ ಪರಿಹಾರದ ವಿಷಯದಲ್ಲಿ ಹಣದ ಹೊರ ಹರಿವನ್ನು ಕಡಿಮೆ ಮಾಡಲು ವೇತನ ಕಡಿತಗೊಳಿಸುವ ಯೋಜನೆಯನ್ನು ಜಾರಿಗೆ ತಂದಿದೆ". ನಾವೂ ಸಹ ಅದೇ ಹಾದಿಯಲ್ಲಿ ಸಾಗಿದ್ದು, ವೇತನ ಕಡಿತ ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.
ಆದಾಯಗಳ ಮೇಲೆ ಕೋವಿಡ್ ಸಾಂಕ್ರಾಮಿಕದ ದುಷ್ಪರಿಣಾಮವು ಗಣನೀಯವಾಗಿ ಕಡಿಮೆಯಾಗುವವರೆಗೆ, ನಮ್ಮ ಮಾಸಿಕ ಸಂಭಾವನೆಗಳಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ನಾವೆಲ್ಲರೂ ಸಮರ್ಪಕ ತ್ಯಾಗ ಮಾಡುವುದು ಅವಶ್ಯಕ" ಎಂದು ವಿಜಯಕೃಷ್ಣನ್ ಮನವಿ ಮಾಡಿದ್ದಾರೆ.
ಪೈಲಟ್‌ಗಳ ಭತ್ಯೆಯನ್ನು ಶೇಕಡಾ 40 ರಷ್ಟು ಕಡಿಮೆ ಮಾಡಲಾಗಿದೆ. ಇತರ ಉದ್ಯೋಗಿಗಳಿಗೆ ಅಂದರೆ 25 ಸಾವಿರ ರೂ.ವರೆಗಿನ ಸಂಬಳ ಇರುವವರಿಗೆ ಯಾವುದೇ ಕಡಿತವಿಲ್ಲ. ಹಿರಿಯ ಅಧಿಕಾರಿಗಳ ದರ್ಜೆಯವರೆಗೆ ಶೇ 5 ರಷ್ಟು ಕಡಿತ ಮಾಡಲಾಗಿದೆ. ಈ ಮಟ್ಟಕ್ಕಿಂತ ದೊಡ್ಡ ಹುದ್ದೆಯಲ್ಲಿರುವವರಿಗೆ ಒಟ್ಟು ವೇತನದಲ್ಲಿ ಶೇ. 7.5 ರಷ್ಟು ಸಂಬಳವನ್ನ ಕಡಿಮೆ ಮಾಡಲಾಗಿದೆ.