ಅರುಣಾಚಲಪ್ರದೇಶ: ಆರು ದಿನಗಳ ಹಿಂದೆ ನಾಪತ್ತೆಯಾದ An-32 ವಿಮಾನದ ಬಗ್ಗೆ ಸರಿಯಾದ ಸುಳಿವು ನೀಡಿದರೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಭಾರತೀಯ ವಾಯುಪಡೆ ಘೋಷಿಸಿದೆ.
ಕಳೆದ ಸೋಮವಾರ ಅಸ್ಸೋನಿಂದ ಹೊರಟು, ನಂತರ ನಾಪತ್ತೆಯಾದ ಸೇನಾ ವಿಮಾನದ ಪತ್ತೆಗಾಗಿ ನಿರಂತರ ಕಾರ್ಯಾಚರಣೆ ನಡೆಸಲಾಗಿದೆ. ಆದರೂ ವಿಮಾನ ಎಲ್ಲಿ ಹೋಯ್ತು ಎಂಬ ಸಣ್ಣ ಸುಳಿವು ಸಹ ಸಿಕ್ಕಿಲ್ಲ. ಇದೇ ಕಾರಣಕ್ಕೆ ವಿಮಾನದ ಬಗ್ಗೆ ಯಾರಾದರೂ ಸುಳಿವು ನೀಡಿದರೂ 5 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ.
ಈಸ್ಟರ್ನ್ ಏರ್ ಕಮ್ಯಾಂಡ್ನ ಎಒಸಿ ಇನ್ ಚಾರ್ಜ್ ಏರ್ ಮಾರ್ಷಲ್ ಆರ್.ಟಿ.ಮಥುರ್ ಅವರು ಘೋಷಿಸಿರುವಂತೆ ವಿಮಾನದ ಬಗ್ಗೆ ಸುಳಿವು ನೀಡಿದ ವ್ಯಕ್ತಿ ಅಥವಾ ಗುಂಪಿಗೆ 5 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ ಎಂದು ರಕ್ಷಣಾ ಸಾರ್ವಜನಿಕ ಸಂಪರ್ಕಾಧಿಕಾರಿ ವಿಂಗ್ ಕಮ್ಯಾಂಡರ್ ರತ್ನಾಕರ್ ಸಿಂಗ್ ಹೇಳಿದ್ದಾರೆ.
ವಿಮಾನದ ಬಗ್ಗೆ ಮಾಹಿತಿ ತಿಳಿದಲ್ಲಿ, 0378-3222164, 9436499477, 9402077267 ಹಾಗೂ 9402132477 ನಂಬರ್ಗಳಿಗೆ ಕರೆ ಮಾಡಬಹುದು ಎಂದಿದ್ದಾರೆ.
ವಿಮಾನ ನಾಪತ್ತೆಯಾದ ದಿನದಿಂದ Sukhoi-30, C-130J, ಎರಡು Mi-17 ಹಾಗೂ ಎರಡು ALH ಹೆಲಿಕಾಪ್ಟರ್ಗಳು ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದವು. ನೌಕಾಪಡೆಯ P-8I ವಿಮಾನ ಹಾಗೂ ಇಸ್ರೋ ಸಹ ಕಾರ್ಯಾಚರಣೆಯಲ್ಲಿ ನಿರಂತರವಾಗಿ ಭಾಗವಹಿಸಿತ್ತು. ಆದರೆ ಈ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಅಲ್ಲದೆ, ಪರ್ವತ ಹಾಗೂ ಅರಣ್ಯ ವ್ಯಾಪಕವಾಗಿ ಹರಡಿರುವುದರಿಂದ ಕಾರ್ಯಾಚರಣೆ ಅಸಾಧ್ಯವಾಗಿದೆ. ಇದರಿಂದ ವಾಯುಪಡೆ ಜನರ ನೆರವು ಪಡೆಯಲು ಈ ನಿರ್ಧಾರ ಮಾಡಿದೆ.