ಕೋಲ್ಕತಾ: ಕೋಲ್ಕತ್ತಾದಿಂದ ಮುಂಬೈಗೆ ತೆರಳುವ ಏರ್ ಏಷ್ಯಾ ವಿಮಾನ ಸ್ಫೋಟಿಸುವುದಾಗಿ ಪ್ರಯಾಣಿಕರೊಬ್ಬರು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಲಾಗಿದೆ.
ಏರ್‌ಏಷ್ಯಾ ಫ್ಲೈಟ್ ಐ 5316 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮೋಹಿನಿ ಮೊಂಡಾಲ್ (25) ಎಂಬುವವರು ಕ್ಯಾಬಿನ್ ಸಿಬ್ಬಂದಿಯೊಬ್ಬರಿಗೆ ಈ ಮಾಹಿತಿ ನೀಡಿದ್ದು, ಅದನ್ನು ಫ್ಲೈಟ್ ಕ್ಯಾಪ್ಟನ್‌ಗೆ ತಲುಪಿಸುವಂತೆ ಕೇಳಿಕೊಂಡಿದ್ದಾರೆ. ಆಕೆಯ ದೇಹಕ್ಕೆ ಬಾಂಬ್‌ಗಳನ್ನು ಕಟ್ಟಲಾಗಿದೆ ಮತ್ತು ಯಾವುದೇ ಕ್ಷಣದಲ್ಲಿ ಅದು ಸ್ಫೋಟಿಸಬಹುದು ಎಂದು ಟಿಪ್ಪಣಿ ತಿಳಿಸಿದೆ. ಹೀಗಾಗಿ ಪೈಲಟ್ ಕೋಲ್ಕತ್ತಾಗೆ ಮರಳಲು ನಿರ್ಧರಿಸಿದರು.
ಶನಿವಾರ ರಾತ್ರಿ 9:57 ಕ್ಕೆ ವಿಮಾನ ಹೊರಟಿತು. ಒಂದು ಗಂಟೆಯ ನಂತರ, ವಿಮಾನವು ಬಾಂಬ್ ಬೆದರಿಕೆಯಿಂದಾಗಿ ಕೋಲ್ಕತ್ತಾಗೆ ಹಿಂದಿರುಗುತ್ತಿದೆ ಎಂದು ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ) ಗೆ ತಿಳಿಸಿತು. ರಾತ್ರಿ 11 ಗಂಟೆಗೆ ಎಟಿಸಿ ಪೂರ್ಣ ತುರ್ತು ಪರಿಸ್ಥಿತಿ ಘೋಷಿಸಿತು. ವಿಮಾನ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ, ಅದನ್ನು ರಾತ್ರಿ 11:46 ಕ್ಕೆ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ಯಲಾಯಿತು.
ಬೆದರಿಕೆಗಳನ್ನು ನಿಭಾಯಿಸಲು ಎಲ್ಲಾ ಪ್ರೋಟೋಕಾಲ್ ಅನ್ನು ಅನುಸರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಪ್ರಯಾಣಿಕನನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ವಶಕ್ಕೆ ತೆಗೆದುಕೊಂಡಿದೆ. ವಿಮಾನದ ಬಗ್ಗೆ ಸಂಪೂರ್ಣ ಶೋಧ ನಡೆಸಲಾಯಿತು ನಂತರ ಅದನ್ನು ಮತ್ತೆ ಹಾರಾಟಕ್ಕೆ ನಿಯೋಜಿಸಲಾಯಿತು ಎಂದು ತಿಳಿದುಬಂದಿದೆ.