ತಿರುವನಂತಪುರಂ (ಕೇರಳ): ಲಾಕ್‌ಡೌನ್ ಕಾರಣದಿಂದಾಗಿ ಕಳೆದ 75 ದಿನಗಳಿಂದ ಬಾಗಿಲು ಹಾಕಲಾಗಿದ್ದ ಕೇರಳದ ಸರ್ಕಾರಿ ಕಚೇರಿಗಳು ಇಂದಿನಿಂದ ಪೂರ್ಣ ಪ್ರಮಾಣದ ಸಿಬ್ಬಂದಿಯೊಂದಿಗೆ ಮತ್ತೆ ಕಾರ್ಯನಿರ್ವಹಿಸುತ್ತಿವೆ.
ಕೇರಳ ರಾಜ್ಯ ಸರ್ಕಾರವು ಕಳೆದ ಭಾನುವಾರ ಹೊರಡಿಸಿದ ಆದೇಶದಲ್ಲಿ ಕಂಟೈನ್‌ಮೆಂಟ್ ವಲಯಗಳನ್ನು ಹೊರತುಪಡಿಸಿ, ರಾಜ್ಯದ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಕಚೇರಿಗಳು ಸೋಮವಾರದಿಂದ ಪೂರ್ಣ ಪ್ರಮಾಣದ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಆದೇಶಿಸಿದೆ.
ಆದರೆ ಕಂಟೈನ್ಮೆಂಟ್ ವಲಯಗಳಲ್ಲಿರುವ ಸರ್ಕಾರಿ ಕಚೇರಿಗಳು ಕನಿಷ್ಠ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸಲಿವೆ ಎಂದು ಸರ್ಕಾರದ ಆದೇಶ ತಿಳಿಸಿದೆ.
ವಿಶೇಷ ಚೇತನರು, ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ಸಿಬ್ಬಂದಿ ಮತ್ತು ವಿಕಲಾಂಗ ಮಕ್ಕಳನ್ನು ನೋಡಿಕೊಳ್ಳುವವರು ಕರ್ತವ್ಯಕ್ಕೆ ಹಾಜರಾಗುವುದನ್ನು ತಪ್ಪಿಸಬೇಕು. ಒಂದು ವರ್ಷದೊಳಗಿನ ಮಕ್ಕಳನ್ನು ಹೊಂದಿರುವ ತಾಯಂದಿರು ಮತ್ತು ಏಳು ತಿಂಗಳ ಗರ್ಭಿಣಿಯರಿಗೆ ವರ್ಕ್ ಫ್ರಂ ಹೋಂ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.