ಬೆಂಗಳೂರು/ನವದೆಹಲಿ: ಚೀನಾದ ಉತ್ಪನ್ನಗಳ ಆಮದು ನಿರ್ಬಂಧಿಸುವಂತೆ ಭಾರತದಲ್ಲಿ ದನಿ ಕೇಳಿ ಬರುತ್ತಿದ್ದು, ಇದೀಗ ಚೀನಾದಿಂದ ರೇಷ್ಮೆ ಆಮದನ್ನು ನಿಷೇಧಿಸುವಂತೆ ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಭಾರತದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ಬಳಿಕ ರೇಷ್ಮೆ ಉದ್ಯಮದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕ ಈ ಬೇಡಿಕೆಯನ್ನಿಟ್ಟಿದೆ.
ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಹಾಗೂ ಕೇರಳ ದೇಶದ ಪ್ರಮುಖ ರೇಷ್ಮೆ ಉತ್ಪನ್ನ ತಯಾರಕರಾಗಿದ್ದು, ಶೇ.70 ರಷ್ಟು ಹಿಪ್ಪುನೇರಳೆ ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತದೆ. ಆದರೆ ಚೀನಾದಿಂದ ರೇಷ್ಮೆಯನ್ನು ಹೆಚ್ಚು ಆಮದು ಮಾಡಿಕೊಳ್ಳುತ್ತಿರುವುದರಿಂದ ದೇಶದಲ್ಲಿ ರೇಷ್ಮೆ ಉದ್ಯಮದ ಸ್ಥಿತಿ ಉತ್ತಮವಾಗಿಲ್ಲ.
ಈ ಕುರಿತು ರಾಜ್ಯ ಸರ್ಕಾರವು ಈಗಾಗಲೇ ಪತ್ರದ ಮೂಲಕ ಕೇಂದ್ರಕ್ಕೆ ಆಗ್ರಹ ಮಾಡಿದೆ. ಚೀನಾ ಕಳಪೆ ಮಟ್ಟದ ರೇಷ್ಮೆಯನ್ನು ದೇಶಕ್ಕೆ ರಫ್ತು ಮಾಡುತ್ತಿದೆ. ಆಮದು ನಿಲ್ಲಿಸಿದರೆ ರಾಜ್ಯದ ರೇಷ್ಮೆ ಬೆಳೆಗಾರರಿಗೆ ಸಹಾಯವೂ ಆಗುತ್ತದೆ, ಗುಣಮಟ್ಟವೂ ಹೆಚ್ಚುತ್ತದೆ ಎಂದು ಕರ್ನಾಟಕ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಸಚಿವ ನಾರಾಯಣ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ಮಾರ್ಚ್ನಲ್ಲಿ ಕೆವಿಐಸಿ ಅಧ್ಯಕ್ಷ ವಿ.ಕೆ.ಸಕ್ಸೇನಾ ಅವರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯೆಲ್ಗೆ ಚೀನಾದಿಂದ ರೇಷ್ಮೆ ಆಮದು ನಿಷೇಧಿಸುವಂತೆ ಮನವಿ ಮಾಡಿದ್ದರು.