ನವದೆಹಲಿ: ಚೀನಾದ ವುಹಾನ್ ನಲ್ಲಿ ಹುಟ್ಟಿದ ಭೀಕರ ಕೊರೊನಾ ವೈರಸ್ ಈಗಾಗಲೇ 210 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಸುಮಾರು 1,50,000 ಜೀವಗಳನ್ನು ಆಪೋಶನ ತೆಗೆದುಕೊಂಡಿದೆ. ಒಂದೆಡೆ ಇದು ಎಲ್ಲಿಗೆ ಕೊನೆಯಾಗುತ್ತದೆ ಎಂಬುದು ಅರಿವಿಗೆ ಬರುತ್ತಿಲ್ಲ. ಮತ್ತೊಂದೆಡೆ ಲಸಿಕೆ ಅಥವಾ ಚಿಕಿತ್ಸೆಯ ಮಾರ್ಗಗಳು ಕೂಡ ಗೋಚರಿಸುತ್ತಿಲ್ಲ. ಮಸುಕಾದ ಹಾದಿಯನ್ನೇ ಅನುಸರಿಸಿ ಪ್ರತಿಯೊಂದು ರಾಷ್ಟ್ರವೂ ಪ್ರಾಯೋಗಿಕವಾಗಿ ಪರಿಹಾರ ಹುಡುಕುತ್ತಿವೆ. ಇಸ್ರೇಲ್, ಕೊರಿಯಾ, ಜರ್ಮನಿ, ಭಾರತ, ಸಿಂಗಾಪುರ ಮತ್ತು ಜಪಾನ್ ರೀತಿಯ ಕೆಲವು ದೇಶಗಳು ಸ್ಫೂರ್ತಿದಾಯಕ ರೀತಿಯಲ್ಲಿ ಪೂರ್ವಭಾವಿಯಾಗಿಯೇ ಸಾಂಕ್ರಾಮಿಕ ರೋಗ ನಿಭಾಯಿಸುತ್ತಿವೆ. ನಿಗೂಢವಾಗಿ ಶ್ರೀಮಂತ ಜಿ 7 ರಾಷ್ಟ್ರಗಳು ಹೆಚ್ಚು ಹಾನಿಗೆ ಒಳಗಾಗಿವೆ. ಕೆಲವು ದಿನಗಳಲ್ಲಿ ಅಮೆರಿಕ ಒಂದರಲ್ಲಿಯೇ ಸಾವಿನ ಸಂಖ್ಯೆ 2000ದ ಆಸುಪಾಸಿಗೆ ತಲುಪಿದೆ.
ಚೀನಾದಲ್ಲಿ ಮಾರಕ ವೈರಸ್‌ಗಳು ಹುಟ್ಟಿಕೊಂಡಿರುವುದು ಇದು ಮೊದಲೇನೂ ಅಲ್ಲ. ಚೀನಾ ವಿಷಯಗಳನ್ನು ಮುಚ್ಚಿಹಾಕುವುದು ಅಸಾಮಾನ್ಯ ಸಂಗತಿ ಏನೂ ಅಲ್ಲ. ಹೊಸತು ಎಂಬುದು ಏನಾದರೂ ಇದ್ದರೆ ಅದು ಯಾವುದೇ ಜವಾಬ್ದಾರಿಯನ್ನು ನಿರಾಕರಿಸುವ ಮತ್ತು ತನಗೆ ಉತ್ತಮ ನಡವಳಿಕೆ ಪ್ರಮಾಣಪತ್ರ ನೀಡುವಂತೆ ಡಬ್ಲ್ಯೂ ಎಚ್ ಒ (ವಿಶ್ವ ಆರೋಗ್ಯ ಸಂಸ್ಥೆ) ಯನ್ನು ಮನವೊಲಿಸುವ ಚೀನಾದ ಧೈರ್ಯ. ಆದರೆ, ಬೀಜಿಂಗ್ ಕೋವಿಡ್- 19 ಟೈಮ್- ಬಾಂಬ್ ಇಡುವಾಗ, ಆ ಕುರಿತು ಒಂದು ಸ್ವಲ್ಪವೂ ಅರಿಯದ ಉಳಿದ ಜಗತ್ತು ತನ್ನ ದೈನಂದಿನ ಕಾರ್ಯಗಳಲ್ಲಿ ಮುಳುಗಿತ್ತು. ಆದರೆ ಒಂದು ಒಳ್ಳೆ ದಿನ ಅದು ಅರಿವಿಗೆ ಬರುವ ಹೊತ್ತಿಗೆ ಆ ಸಾಂಕ್ರಾಮಿಕ ಪಿಡುಗು ನಮ್ಮ ನಗರ ಪಟ್ಟಣಗಳಿಗೂ ಹಬ್ಬಿತ್ತು.
ಆಘಾತಕಾರಿ ಸಂಗತಿ ಎಂದರೆ ಅದೃಷ್ಟಹೀನ ಪ್ರಪಂಚ ತನ್ನ ನಾಶದ ಮೂಕ ಪ್ರೇಕ್ಷಕನಾಗಿ ನಿಲ್ಲಲು ಹೊರಟಿದೆ. ನಿರ್ಣಾಯಕ ಔಷಧೀಯ ಉತ್ಪನ್ನಗಳೂ ಸೇರಿದಂತೆ, ಇದ್ದಕ್ಕಿದ್ದ ಹಾಗೆಯೇ ಚೀನಾದಿಂದ ಉತ್ಪಾದನಾ ಸೌಲಭ್ಯಗಳನ್ನು ಅರಸುವ ಮಹಾ ಹೆಡ್ಡತನಕ್ಕೆ ಅದು ಮುಂದಾಗಿದೆ. ಆಮದು ಅವಲಂಬನೆ ಕುರಿತಂತೆ (ಚೀನಾದಿಂದ ಬಹುಪಾಲು) ಇದು ಪಾಶ್ಚಾತ್ಯ ದೇಶಗಳ ನಿಲುವಿನ ಮೇಲೆ ಬೆಳಕು ಚೆಲ್ಲುತ್ತದೆ. ಆ ದೇಶಗಳ ಅವಶ್ಯಕತೆಯ ಶೇ 95ರವರೆಗೆ ಆಮದು ಅವಲಂಬನೆ ವಿಸ್ತರಿಸುತ್ತದೆ ಎಂಬುದನ್ನು ಇದರಿಂದ ಅರಿಯಬಹುದು. ಪರಿಣಾಮ ಆ ದೇಶಗಳು ಮುಖಗವಸು, ಕೈಗವಸು ಮತ್ತು ವೆಂಟಿಲೇಟರ್‌ಗಳ ಕೊರತೆಯನ್ನಷ್ಟೇ ಅಲ್ಲ, ಪ್ಯಾರೆಸಿಟಮಾಲ್ ರೀತಿಯ ಮೂಲಭೂತ ಔಷಧಿಯ ಕೊರತೆಯನ್ನೂ ಎದುರಿಸುತ್ತಿವೆ.
ಸಾಂಕ್ರಾಮಿಕ ಪಿಡುಗಿಗೆ ತುತ್ತಾದ ದೇಶಗಳು ನೂರಾರು ದಶಲಕ್ಷ ಡಾಲರ್ ಮೊತ್ತದ ಸರಕನ್ನು ಆಮದು ಮಾಡಿಕೊಳ್ಳಲು ಮುಂದಾಗಿದ್ದವು. ಆದರೆ ಚೀನಾದ ಅನೇಕ ನಿರ್ಲಜ್ಜ ಕಂಪನಿಗಳು, ಆ ದೇಶಗಳಿಗೆ ಗುಣಮಟ್ಟದ್ದೇ ಇರಲಿ ಅಥವಾ ದೋಷಯುಕ್ತವೇ ಆಗಿರಲಿ ಅಂತಹ ಪರೀಕ್ಷಾ ಕಿಟ್‌ಗಳು, ಕೈಗವಸುಗಳು ಮತ್ತು ಸಂಬಂಧಿತ ವಸ್ತುಗಳನ್ನು ಒದಗಿಸುವ ಗೋಜಿಗೂ ಹೋಗಲಿಲ್ಲ ಎಂದು ತಿಳಿದುಬಂದಿದೆ. .
"ಅಮೆರಿಕದ ಹೆಚ್ಚಿನ ಮುಖಗವಸುಗಳು ಚೀನಾದಲ್ಲಿ ಉತ್ಪತ್ತಿ ಆಗುತ್ತವೆ. ರಾಜತಾಂತ್ರಿಕ ಹತೋಟಿ ಎಂಬ ಹೆಸರಿನಲ್ಲಿ ಸಂಚಾರ ನಿಷೇಧ ಹೇರುವ ಮೂಲಕ ಅಮೆರಿಕ ವಿರುದ್ಧ ಚೀನಾ ಪ್ರತೀಕಾರ ಕೈಗೊಂಡರೆ ಆಗ ಅಮೆರಿಕ ಹೊಸ ನ್ಯುಮೋನಿಯಾ ಸಾಂಕ್ರಾಮಿಕದ ಸುಳಿಗೆ ಸಿಲುಕುತ್ತದೆ. ಹಾಗೆ ಆಗದಿರಲು ಅಮೆರಿಕ ಚೀನಾದ ಕ್ಷಮೆ ಯಾಚಿಸಬೇಕಾಗುತ್ತದೆ ಮತ್ತು ಇಡೀ ಜಗತ್ತು ಚೀನಾಕ್ಕೆ ಕೃತಜ್ಞವಾಗಿ ಇರಬೇಕಾಗುತ್ತದೆ” ಎಂಬ ಅನಾಹುತಕಾರಿ ಸುಳಿವನ್ನು ಚೀನಾದ ಅಧಿಕೃತ ಸುದ್ದಿಸಂಸ್ಥೆ ಕ್ಸಿನ್ ಹುವಾ ಮಾರ್ಚ್ 4ರಂದು ಬಿಟ್ಟುಕೊಟ್ಟಿದೆ.
ಹಾಗಾದರೆ, ಸದ್ಯದ ಪರಿಸ್ಥಿತಿ ಏನು? ಬಯಸದೇ ಇದ್ದ ಮಾನವ ಬಲಿಯ ಜೊತೆಗೆ ಎಲ್ಲ ಖಂಡಗಳಲ್ಲಿರುವ ದೇಶಗಳು ಹೀನಾಯ ಆರ್ಥಿಕ ಹಿಂಜರಿತಕ್ಕೆ ತುತ್ತಾಗಿವೆ. ಜಾಗತಿಕ ಪೂರೈಕೆ ಸರಪಳಿ ಅಸ್ತವ್ಯಸ್ತಗೊಂಡಿದೆ, ಕಾರ್ಖಾನೆಗಳು ಸ್ಥಗಿತಗೊಳ್ಳುತ್ತಿವೆ, ನಿರುದ್ಯೋಗ ಹೆಚ್ಚುತ್ತಿದೆ (ಮಾರ್ಚ್ ಮಧ್ಯದಿಂದ ಅಮೆರಿಕದಲ್ಲಿ 22 ದಶಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ) ಮತ್ತು ಅಗತ್ಯ ವಸ್ತುಗಳ ಕೊರತೆ ಎಂಬುದು ಸಾಮಾನ್ಯ ಸಂಗತಿ ಆಗುತ್ತಿದೆ. ಒ ಇ ಸಿ ಡಿ ಯ (ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ) ಮುಖ್ಯ ಅರ್ಥಶಾಸ್ತ್ರಜ್ಞರು "ಎಲ್ಲಾ ಒ ಇ ಸಿ ಡಿ ದೇಶಗಳಲ್ಲಿ ಉತ್ಪಾದನಾ ಮಟ್ಟ ಶೇ 25 ರಿಂದ 30ರಷ್ಟು ಕುಸಿದಿದೆ” ಎಂದು ಹೇಳುತ್ತಾರೆ.
ಕಚ್ಚಾ ತೈಲ ಬೆಲೆ ಶೇ 70ರಷ್ಟು ಕುಸಿದಿದೆ (ಭಾರತ ದೂರುತ್ತಿಲ್ಲ!). 1.57 ಶತಕೋಟಿ ವಿದ್ಯಾರ್ಥಿಗಳು ಮತ್ತು ವಿದ್ವಾಂಸರ ಶೈಕ್ಷಣಿಕ ಪ್ರಗತಿಗೆ ಅಡ್ಡಿ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಆತಿಥ್ಯ, ಪ್ರವಾಸೋದ್ಯಮ, ವಾಯುಯಾನ ಮತ್ತು ನಿರ್ಮಾಣ ಕ್ಷೇತ್ರಗಳು ದೊಡ್ಡ ಹೊಡೆತ ಅನುಭವಿಸುತ್ತಿವೆ. ಅವುಗಳ ಚೇತರಿಕೆ ತ್ವರಿತವೂ ಆಗಿರದು ಅಥವಾ ಯಾತನಾರಹಿತವೂ ಆಗದೆ ಇರದು.
ಐ ಎಂ ಎಫ್ (ಅಂತರರಾಷ್ಟ್ರೀಯ ಹಣಕಾಸು ನಿಧಿ) ಅಂದಾಜಿನ ಪ್ರಕಾರ ಈ ವರ್ಷ ಜಾಗತಿಕ ಆರ್ಥಿಕತೆಯು ಶೇ 3ರಷ್ಟು ಸಂಕುಚಿತಗೊಳ್ಳುತ್ತದೆ, ಇದು 1930 ರ ಮಹಾ ಆರ್ಥಿಕ ಕುಸಿತದ ನಂತರದ ಅತಿ ಕೆಟ್ಟ ಸ್ಥಿತಿ ಆಗಿದೆ. ಇದು ಮುಂದಿನ ಎರಡು ವರ್ಷಗಳಲ್ಲಿ 9 ಟ್ರಿಲಿಯನ್ ಕೋಟಿ ಜಾಗತಿಕ ಜಿಡಿಪಿಯನ್ನು (ಡಾಲರ್ 87 ಟ್ರಿಲಿಯನ್) ಕಡಿತಗೊಳಿಸಬಹುದು. ಚೀನಾದ ಆರ್ಥಿಕತೆಯು ಕೇವಲ ಶೇ 1.2 (1976 ರಿಂದ ನಿಧಾನ) ಮತ್ತು ಭಾರತದ್ದು ಶೇ 1.5ರಷ್ಟು ವಿಸ್ತರಣೆ ಆಗಬಹುದು.
ಸಾಂಕ್ರಾಮಿಕ ರೋಗವು ಹೆಚ್ಚು ಕಾಲ ಉಳಿಯುತ್ತದೆ ಮತ್ತು ಅದು ಭಾರಿ ಹಾನಿ ಉಂಟುಮಾಡುತ್ತದೆ. ಕಣ್ಣೆದುರಿನ ಬಿಕ್ಕಟ್ಟು ಕೊನೆ ಆಗುವವರೆಗೆ 'ಹೊಸ ಸಹಜತೆ’ಯನ್ನು ಕಲ್ಪಿಸಿಕೊಳ್ಳುವುದು ಕೂಡ ಕಷ್ಟ. ಆಗಲೂ ಸಹ, ಕಾಡಿನ ಬೆಂಕಿಯಂತೆ ಸಾಂಕ್ರಾಮಿಕವು ಸ್ವಲ್ಪ ಸಮಯದವರೆಗೆ ಹೊಗೆಯಾಡುತ್ತಾ ಇರುತ್ತದೆ ಮತ್ತು ಆಗಾಗ ಫೂತ್ಕರಿಸುತ್ತಲೇ ಇರುತ್ತದೆ. ಇದು ಜೀವನಶೈಲಿ, ವ್ಯವಹಾರಗಳು, ಸಂಬಂಧಗಳು ಮತ್ತು ಅಧಿಕಾರ ಕ್ರಿಯಾಶೀಲತೆಯನ್ನು ಗಮನಾರ್ಹವಾಗಿ ಬದಲಾಯಿಸುತ್ತದೆ. ಸೂಕ್ಷ್ಮ ಮಟ್ಟದಲ್ಲಿ, ಮನೆಯಿಂದ ಕೆಲಸ ಮಾಡುವುದು ಮತ್ತು ಕೈ ಶುದ್ಧವಾಗಿಟ್ಟುಕೊಳ್ಳುವ ಸಂಸ್ಕೃತಿ ಪ್ರಾಮುಖ್ಯತೆ ಪಡೆಯುತ್ತದೆ . ಹೀಗಾಗಿ ಮುಖವಾಡಗಳು, ಸಂವಾದಾತ್ಮಕ ಡಿಜಿಟಲ್ ಸೈಟ್‌ಗಳು ಮತ್ತು ಇ ವಾಣಿಜ್ಯ ವೇದಿಕೆಗಳು ಮುನ್ನೆಲೆಗೆ ಬರಲಿವೆ. ದತ್ತಾಂಶದ ಬೇಡಿಕೆ ಘಾತೀಯವಾಗಿ ಬೆಳೆಯುತ್ತದೆ.
ಸ್ಥೂಲ ಮಟ್ಟದಲ್ಲಿ, ಬದಲಾವಣೆಗಳು ಇನ್ನಷ್ಟು ದೂರ ಎನಿಸಬಹುದು. ದೇಶಗಳು ಒಳಮುಖವಾಗಿ ಕಾಣುತ್ತವೆ, ವಿಶೇಷವಾಗಿ ಕಾರ್ಯತಂತ್ರದ ಮತ್ತು ಅಗತ್ಯ ಉತ್ಪನ್ನಗಳ ತಯಾರಿಕೆ ನಿರ್ಣಾಯಕವಾಗಿರುತ್ತದೆ. ರಕ್ಷಣಾತ್ಮಕ ಗೋಡೆಗಳು ಹೆಚ್ಚಾಗುತ್ತವೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಹೂಡಿಕೆ ಕ್ಷೀಣಿಸುತ್ತದೆ ಮತ್ತು ಸರ್ಕಾರಗಳು ಸ್ವ ಹಿತಾಸಕ್ತಿಯತ್ತ ತೀವ್ರ ಗಮನ ನೆಡುತ್ತವೆ
ಇನ್ಸ್ಟಿಟ್ಯೂಟ್ ಫಾರ್ ಇಂಟರ್ ನ್ಯಾಷನಲ್ ಫೈನಾನ್ಸ್ (ಐಐಎಫ್) ಪ್ರಕಾರ, ಉದಯೋನ್ಮುಖ ಮಾರುಕಟ್ಟೆಗಳಿಂದ ಈಗಾಗಲೇ ಸುಮಾರು 100 ಶತಕೋಟಿ ಡಾಲರ್ ಹೂಡಿಕೆಗಳು ಕಾಲ್ತೆಗೆದಿವೆ, ಇದು 2008 ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನಲ್ಲಿ ಕಂಡುಬರುವ ಬಂಡವಾಳದ ನಿರ್ಗಮನಕ್ಕಿಂತ ಮೂರು ಪಟ್ಟು ಹೆಚ್ಚಾಗಲಿದೆ. ಜಪಾನ್ ಈಗಾಗಲೇ ಚೀನಾದಿಂದ ಹೊರಗೆ ಅಂದರೆ ಜಪಾನಿನಲ್ಲಿ ಅಥವಾ ತೃತೀಯ ರಾಷ್ಟ್ರಗಳಲ್ಲಿ ಉತ್ಪನ್ನಗಳನ್ನು ತಯಾರಿಸುವವರಿಗೆ ಬೆಂಬಲ ನೀಡಲು 2.2 ಶತಕೋಟಿ ಡಾಲರನ್ನು ಮೀಸಲಿರಿಸಿದೆ.
ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ಅಧಿಕಾರ ಸಮೀಕರಣಗಳು ಗಂಭೀರ ಪರಿಶೀಲನೆಗೆ ಒಳಗಾಗುತ್ತವೆ. ವಿವಿಧ ಪ್ರದೇಶಗಳಲ್ಲಿ ಅಮೆರಿಕ ನೇತೃತ್ವದ ಭದ್ರತಾ ಶಿಲ್ಪ ಕಳೆಗುಂದಲಿದೆ, ಆದರೆ ಚೀನಾದ ಭಯ ಹೆಚ್ಚಾಗುತ್ತದೆ. ವಾಸ್ತವವಾಗಿ, ಚೀನಾ ಸೋಲುಂಡ ಅತಿದೊಡ್ಡ ದೇಶವಾಗಿ ಹೊರಹೊಮ್ಮಬಹುದು. ಚೀನೀ ವಿದ್ಯಾರ್ಥಿಗಳು, ವಿಜ್ಞಾನಿಗಳು ಮತ್ತು ಆ ದೇಶದ ವ್ಯವಹಾರಗಳು ಹೆಚ್ಚಿನ ಪರಿಶೀಲನೆಗೆ ಒಳಪಡುತ್ತವೆ. ಪರ್ಯಾಯಗಳ ರ‍್ಯಾಯಗಳ ಅಪೇಕ್ಷೆ ಆರಂಭವಾಗಿ, ಕನಿಷ್ಠ ಅಲ್ಪಾವಧಿಯಿಂದ ಮಧ್ಯಮ ಅವಧಿಯವರೆಗೆ, ಶಸ್ತ್ರಾಸ್ತ್ರ ಪೈಪೋಟಿ ನಡೆಯಬಹುದು. ಆ ಮೂಲಕ ಉದ್ವಿಗ್ನತೆ ಮತ್ತು ಅಸ್ಥಿರತೆ ಹೆಚ್ಚಾಗಬಹುದು.
ವಿಶ್ವಸಂಸ್ಥೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಜಾಗತಿಕ ಆಡಳಿತ ಸಂಸ್ಥೆಗಳು ನಿಷ್ಪರಿಣಾಮಕಾರಿ ಮತ್ತು ಪಕ್ಷಪಾತಿ ಎಂದು ಕಂಡುಬಂದಿದೆ. ಈ ವರ್ಷದ ಆರಂಭದಲ್ಲಿ ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ - "ವಿಶ್ವಸಂಸ್ಥೆಯು ತನ್ನ ಇತಿಹಾಸದಲ್ಲಿಯೇ ಇಂದು ಕಡಿಮೆ ವಿಶ್ವಾಸಾರ್ಹ ಸಂಸ್ಥೆ ಆಗಿದೆ" ಎಂದು ಹೇಳಿದ್ದಾರೆ. ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಒಂದು, ಈ ಸಂಸ್ಥೆಗಳು ತಮ್ಮ ನಿರ್ಧಾರಗಳನ್ನು ಜಾರಿಗೊಳಿಸಲು ವಿಶ್ವಸಂಸ್ಥೆಯ ಐದು ಕಾಯಂ ಸದಸ್ಯ ದೇಶಗಳನ್ನು ಅವಲಂಬಿಸಿರುವುದು ಮತ್ತು ಅವುಗಳ ನಡುವೆ ನಿರಾಶಾದಾಯಕ ರೀತಿಯಲ್ಲಿ ಬಿರುಕು ಮೂಡಿರುವುದು.
ಎರಡನೇಯದು, ಆ ದೇಶಗಳ ಮೇಲೆ ಚೀನಾ ಹಿಡಿತವು ಮೌಲ್ಯಮಾಪನ ಮಾಡಿದ ವಿತ್ತೀಯ ಕೊಡುಗೆಗೆ ವ್ಯತಿರಿಕ್ತವಾಗಿ ಬೆಳೆದಿದೆ, ಇದು ಅಮೆರಿಕಕ್ಕೆ ಹೋಲಿಸಿದರೆ ಉತ್ತಮವಾಗಿದೆ. ( 2018- 19ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೆ ಚೀನಾ ಮತ್ತು ಅಮೆರಿಕದ ಒಟ್ಟು ಕೊಡುಗೆ ಕ್ರಮವಾಗಿ 86 ಮತ್ತು 893 ದಶಲಕ್ಷ ಡಾಲರ್ ). ಬೀಜಿಂಗ್ ಸ್ನೇಹಪರ ಅಭ್ಯರ್ಥಿಗಳನ್ನು ಪ್ರಮುಖ ಸ್ಥಾನಗಳಿಗೆ ಆಯ್ಕೆ ಮಾಡಲು ಗಮನ ಹರಿಸುವ ಬದಲು ಅವರನ್ನು ವ್ಯವಸ್ಥಿತವಾಗಿ 'ಬೆಳೆಸಲು' ಮುಂದಾಗುತ್ತದೆ. ಪ್ರಸ್ತುತ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರೂ ಚೀನಾದಿಂದ ನಾಮ ನಿರ್ದೇಶನಗೊಂಡವರೇ ಆಗಿದ್ದಾರೆ. ಅದರಂತೆ, ಸುಧಾರಣೆಗೆ ಹೆಚ್ಚಿನ ಒತ್ತು ದೊರೆಯದೆ ಈ ಸಂಸ್ಥೆಗಳು ಮತ್ತಷ್ಟು ಮೂಲೆಗುಂಪಾಗಬಹುದು.
ಅಂತಿಮವಾಗಿ, ಭಾರತ ಎಷ್ಟು ಸುರಕ್ಷಿತ ಎಂಬ ದೊಡ್ಡ ಪ್ರಶ್ನೆ ಎದ್ದಿದೆ. ಇದುವರೆಗಿನ ಸೂಚನೆಗಳು ಸಕಾರಾತ್ಮಕವಾಗಿ ಇವೆ. ಸಮುದಾಯ ಸೋಂಕು ತಪ್ಪಿಸಲು ನಾವು ಯಶಸ್ವಿ ಆಗಿದ್ದೇವೆ. ನಾವು ಸಾಂಕ್ರಾಮಿಕ ರೋಗದ ವಿರುದ್ಧ ಸೆಣಸುತ್ತಿರುವಾಗಲೇ, ಆರ್ಥಿಕತೆಗೆ ಚೈತನ್ಯ ತುಂಬುವ ಕ್ರಮಗಳನ್ನು ಸರ್ಕಾರ ಲೆಕ್ಕ ಹಾಕುತ್ತಿದೆ. ಹೆಚ್ಚು ಸಮಯಾವಕಾಶ ಇರುವುದಿಲ್ಲ. ಏಕೆಂದರೆ ನಿರೀಕ್ಷೆ ಹೊತ್ತ ಕಂಗಳನ್ನು ಎಲ್ಲೆಡೆ ಕಾಣಬಹುದು. ಸುಲಭ ಷರತ್ತುಗಳು, ಕಡಿಮೆ ಜಿ ಎಸ್ ಟಿ ದರ, ಭೂಮಿ ಮತ್ತು ಕಾರ್ಮಿಕ ಸುಧಾರಣೆಗಳು, ಸಮಯಕ್ಕೆ ಅನುಗುಣವಾದ ಆನ್‌ಲೈನ್ ಅನುಮೋದನೆಗಳು ಮತ್ತು ಸಾರಿಗೆ ತೊಂದರೆಗಳ ನಿವಾರಣೆಯನ್ನು ಕೂಡ 'ಮೇಕ್ ಇನ್ ಇಂಡಿಯಾ 2.0' ಯೋಜನೆ ಒಳಗೊಳ್ಳಬೇಕಾಗುತ್ತದೆ.
ಕೋವಿಡ್ - 19 ಅಭೂತಪೂರ್ವ ಸವಾಲು ಆದರೆ ಅದೊಂದು ಅವಕಾಶ ಕೂಡ. ಎರಡೂ ಲೆಕ್ಕದಲ್ಲಿ ಯಶಸ್ವಿ ಆಗುವ ಚಾಕಚಕ್ಯತೆ ನಮಗೆ ದೊರೆಯಲಿ ಎಂದು ಆಶಿಸೋಣ.
ಲೇಖಕರು- ರಾಯಭಾರಿ ವಿಷ್ಣು ಪ್ರಕಾಶ್