ನವದೆಹಲಿ: ಚೆನ್ನೈನಲ್ಲಿ ಲಸಿಕೆ ಪ್ರಯೋಗದಲ್ಲಿ ಭಾಗವಹಿಸಿದವರಿಗೆ ಅಡ್ಡಪರಿಣಾಮ ಬೀರಿದೆ ಎಂಬ ಘಟನೆಯು ವ್ಯಾಕ್ಸಿನ್ ಪ್ರಯೋಗದ ಟೈಮ್‌ಲೈನ್ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.
ಪ್ರತಿಕೂಲ ಘಟನೆಯ ಸಂದರ್ಭದಲ್ಲಿ, ಸಮಿತಿ ಗಮನಿಸಿ ತನ್ನ ವರದಿಯನ್ನು ಭಾರತದ ಡ್ರಗ್ ಕಂಟ್ರೋಲರ್ ಜನರಲ್ಗೆ ನೀಡುತ್ತದೆ ಎಂದು ಅವರು ಹೇಳಿದರು. ಕೋವಿಶೀಲ್ಡ್ ಲಸಿಕೆ ಪ್ರಯೋಗದಲ್ಲಿ ಭಾಗವಹಿಸಿದ ಚೆನ್ನೈ ಸ್ವಯಂಸೇವಕರೊಬ್ಬರು ಅಡ್ಡಪರಿಣಾಮದಿಂದ ಬಳಲುತ್ತಿರುವುದಾಗಿ ಆರೋಪಿಸಿದ್ದರು. ಈ ಕುರಿತು ರಾಜೇಶ್ ಭೂಷಣ್ ಪ್ರತಿಕ್ರಿಯಿಸಿದ್ದಾರೆ.
"ಪ್ರತಿಕೂಲ ಘಟನೆಯು ಲಸಿಕೆಯ ಟೈಮ್‌ಲೈನ್ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣವಿದೆ ಆದ್ದರಿಂದ ಪ್ರಕರಣದ ನಿರ್ದಿಷ್ಟತೆ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದಿದ್ದಾರೆ.
ಕ್ಲಿನಿಕಲ್ ಪ್ರಯೋಗ ಪ್ರಾರಂಭವಾದಾಗ, ಅದರಲ್ಲಿ ಭಾಗವಹಿಸುವವರು ಪೂರ್ವ ತಿಳುವಳಿಕೆಯುಳ್ಳ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿರುತ್ತಾರೆ ಎಂದು ಭೂಷಣ್ ಹೇಳಿದ್ದಾರೆ. ಇದು ಜಾಗತಿಕ ಅಭ್ಯಾಸವಾಗಿದೆ, ಇದು ಎಲ್ಲಾ ದೇಶಗಳಲ್ಲೂ ನಡೆಯುತ್ತದೆ. ಪರೀಕ್ಷೆಯಲ್ಲಿ ಭಾಗವಹಿಸುವವರಿಗೆ ಅಡ್ಡಪರಿಣಾಮ ಬೀರಬಹುದು ಎಂದು ಮೊದಲೇ ಮಾಹಿತಿ ನೀಡಿರುತ್ತಾರೆ ಎಂದು ಹೇಳಿದ್ದಾರೆ.