ಅಹಮದಾಬಾದ್ (ಗುಜರಾತ್): ಕೊರೊನಾ ಎರಡನೇ ಅಲೆ ಎಂಬಂತೆ ಪ್ರಕರಣಗಳ ಸಂಖ್ಯೆಯಲ್ಲಿ ನಿಧಾನವಾಗಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆ ಜನರಲ್ಲಿ ಜಾಗೃತಿ ಮೂಡಿಸಲು ಟೀ ಮಾರಾಟಗಾರನೊಬ್ಬ ವಿಭಿನ್ನ ಕೆಲಸ ಮಾಡುತ್ತಿದ್ದಾನೆ.
ವಡೋದರದಲ್ಲಿರುವ ಈ ಟೀ ಅಂಗಡಿ ಮಾಲೀಕ ಗ್ರಾಹಕರಿಗೆ ಟೀ ಮತ್ತು ಕಾಫಿಯೊಂದಿಗೆ ಮಾಸ್ಕ್ ಅನ್ನು ಉಚಿತವಾಗಿ ನೀಡುತ್ತಿದ್ದಾನೆ. ವಡೋದರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ಹೆಚ್ಚುತ್ತಿದ್ದು, ಸ್ಥಳೀಯ ಆಡಳಿತ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದವರಿಗೆ 1 ಸಾವಿರ ರೂಪಾಯಿ ದಂಡ ವಿಧಿಸುವುದಾಗಿಯೂ ಘೋಷಿಸಿದೆ. ಆದರೆ ಈ ನಿಯಮವನ್ನು ಜನತೆ ಸರಿಯಾಗಿ ಪಾಲಿಸುತ್ತಿರಲಿಲ್ಲ. ಹೀಗಾಗಿ ಟೀ ಅಂಗಡಿಯಾತ ಈ ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾನೆ.
ಆತ ಈವರೆಗೆ ಸುಮಾರು 650ಕ್ಕೂ ಅಧಿಕ ಮಾಸ್ಕ್ಗಳನ್ನು ಗ್ರಾಹಕರಿಗೆ ನೀಡಿದ್ದು, ಕೊರೊನಾ ಸೋಂಕು ಸಂಪೂರ್ಣವಾಗಿ ಮರೆಯಾಗುವವರೆಗೂ ಮಾಸ್ಕ್ ವಿತರಿಸುವುದಾಗಿ ತಿಳಿಸಿದ್ದಾನೆ. ಕೋವಿಡ್ ಹೆಚ್ಚುತ್ತಿರುವ ಕಾರಣ ಗುಜರಾತ್ ಸರ್ಕಾರವು, ಅಹಮದಾಬಾದ್, ರಾಜ್ಕೋಟ್, ವಡೋದರಾ ಮತ್ತು ಸೂರತ್ನಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಿದೆ.