ನವದೆಹಲಿ: ದೇಶಾದ್ಯಂತ ಲಾಕ್ಡೌನ್ ಮಾಡಿ ಆದೇಶ ಹೊರಹಾಕಲಾಗಿದ್ದು, ಇದರಿಂದ ಕೂಲಿ ಕಾರ್ಮಿಕರ ಸ್ಥಿತಿ ಮತ್ತಷ್ಟು ಗಂಭೀರ ಸ್ಥಿತಿ ತಲುಪಿದೆ. ಮನೆಯಿಂದ ಹೊರಬಾರದಂತಹ ಪರಿಸ್ಥಿತಿ ನಿರ್ಮಾಣಗೊಂಡಿರುವ ಕಾರಣ ಅವರು ದಿನದ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ಉದ್ಭವವಾಗಿದೆ.
ದೆಹಲಿಯಲ್ಲಿ ಜಂತರ್ ಮಂತರ್ ಬಳಿಯ ಬೀದಿಯಲ್ಲಿ ಜೀವನ ನಡೆಸುತ್ತಿರುವ ಸಪ್ನಾ ಹಾಗೂ ಸಂಜಯ್ ತಮ್ಮ ಗೋಳು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಪತ್ನಿ 8 ತಿಂಗಳ ಗರ್ಭಿಣಿ. ದೇಶ ಸಂಪೂರ್ಣವಾಗಿ ಲಾಕ್ಡೌನ್ ಆಗಿದ್ದರಿಂದ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಣಗೊಂಡಿದೆ. ನಮಗೆ ಪಡಿತರ ಕೂಡ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನನ್ನ ಹೆಂಡತಿಯನ್ನ ಯಾವ ರೀತಿಯಾಗಿ ನೋಡಿಕೊಳ್ಳಬೇಕು ಎಂಬುದು ಗೊತ್ತಾಗುತ್ತಿಲ್ಲ. ಕಳೆದೆರಡು ದಿನಗಳಿಂದ ಆಕೆ ಹಸಿವಿನಿಂದ ಬಳಲುತ್ತಿದ್ದು, ಅದನ್ನು ನೋಡಲು ನನ್ನಿಂದ ಆಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ ಸಪ್ನಾ ಪತಿ ಸಂಜಯ.
ಪ್ರತಿದಿನ ಕೆಲಸ ಮಾಡುತ್ತಿದ್ದ ನಾವಿಬ್ಬರು ಸೇರಿ 600 ರೂ ಗಳಿಕೆ ಮಾಡುತ್ತಿದ್ದೆವು. ಆದರೆ, ಇದೀಗ ದಿಢೀರ್ ಆಗಿ ಎಲ್ಲವೂ ಬಂದ್ ಆಗಿರುವುದರಿಂದ ಜೀವನ ನಡೆಸುವುದು ತುಂಬಾ ಕಷ್ಟಕರವಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಯಾವ ರೀತಿಯಾಗಿ ಜೀವನ ನಡೆಸುವುದು ಎಂಬುದು ಗೊತ್ತಾಗುತ್ತಿಲ್ಲ. ಮನೆಯಲ್ಲಿ ಕೇವಲ 1 ಕೆಜಿ ರೈಸ್ ಇತ್ತು. ಇದೀಗ ಅದು ಖಾಲಿ ಆಗಿದೆ. ನನ್ನ ಹೆಂಡತಿ ಊಟ ಮಾಡಿದ ಮೇಲೆ ಉಳಿದರೆ ನಾನು ಊಟ ಮಾಡಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಕೆ ಹೇಗೆ ಊಟ ಮಾಡುತ್ತಾಳೆ ಎಂದು ತಮ್ಮ ಮನದಾಳ ಬಿಚ್ಚಿಟ್ಟಿದ್ದಾರೆ.
ನನ್ನ ಹೆಂಡತಿ ಸರಿಯಾಗಿ ಊಟ ಮಾಡಿದ್ರೆ ಮಾತ್ರ ಆರೋಗ್ಯವಂತ ಮಗುವಿಗೆ ಜನ್ಮ ನೀಡಲು ಸಾಧ್ಯ. ಆದರೆ, ಈ ಸ್ಥಿತಿಯಲ್ಲಿ ಏನು ಮಾಡಬೇಕು. ನಮಗೆ ಸಹಾಯ ಮಾಡಲು ಯಾರು ಮುಂದಾಗುತ್ತಿಲ್ಲ ಎಂದಿದ್ದಾರೆ.